ಅಭಿವೃದ್ಧಿ ವಿಷಯದಲ್ಲಿ ಯಾವುದೆ ರಾಜಕೀಯ ಬೇಡ: ಎಚ್.ಡಿ.ರೇವಣ್ಣ

Update: 2018-07-04 14:57 GMT

ಬೆಂಗಳೂರು, ಜು.4: ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ಮುಂದಿನ ಎರಡು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಇದೆ. ಅಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು. ಯಾವುದೇ ಬೇಡಿಕೆಯಿದ್ದರೆ ಪೂರೈಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭರವಸೆ ನೀಡಿದರು.

ಬುಧವಾರ ವಿಧಾನ ಪರಿಷತ್‌ನಲ್ಲಿ ನಿಯಮ-72ರಡಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಅವರು ಮಂಡಿಸಿದ ಗಮನ ಸೆಳೆವ ಸೂಚನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ಜನ ಏನು ಕೇಳುತ್ತಾರೆ, ಉತ್ತಮ ರಸ್ತೆ, ಸೇತುವೆ, ಕುಡಿಯುವ ನೀರು ಕೇಳುತ್ತಾರೆ ಅಷ್ಟೆ. ಅವುಗಳನ್ನು ಒದಗಿಸಿಕೊಡುವುದು ನಮ್ಮ ಕರ್ತವ್ಯ ಎಂದರು.

ಯುಪಿಎ-ಎನ್‌ಡಿಎ ಎಂದು ಯಾವುದೇ ರಾಜಕೀಯದ ಮಾತು ಬೇಡ. ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಇದೆ. ಯಾವುದೇ ಬೇಡಿಕೆಯಿದ್ದರೆ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಹಿಂದಿನ ಯುಪಿಎ ಸರಕಾರ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಈಗಿನ ಎನ್‌ಡಿಎ ಸರಕಾರವೂ ನೆರವು ನೀಡಿದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-169ರ ಗುರುಪುರ ಸೇತುವೆ ನದಿ ಪ್ರವಾಹ ಮತ್ತು ಹೆಚ್ಚಿನ ನೀರು ಹರಿವಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದರು. ಅಲ್ಲದೆ, 38 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸುವ ಪ್ರಸ್ತಾಪವನ್ನು ಈಗಾಗಲೇ ತಯಾರಿಸಿ ಅನುಮೋದನೆಗಾಗಿ ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News