ಸಾಲ ಮನ್ನಾ ಫ್ಯಾಷನ್ ಆಗುವುದು ಬೇಡ: ಸ್ಪೀಕರ್ ರಮೇಶ್ ಕುಮಾರ್

Update: 2018-07-04 15:02 GMT

ಬೆಂಗಳೂರು, ಜು.4: ವಿಧಾನಸಭೆಯ ಮೂರನೇ ದಿನದ ಅಧಿವೇಶನದಲ್ಲೂ ರೈತರ ಸಾಲಮನ್ನಾ ವಿಚಾರ ಪ್ರತಿಧ್ವನಿಸಿತು.

ಸಾಲಮನ್ನಾ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಬಿ.ಶ್ರೀರಾಮುಲು, ರಾಜ್ಯಪಾಲರ ಭಾಷಣದಲ್ಲಿ ರೈತರ ಸಾಲಮನ್ನಾ ಕುರಿತು ಯಾವುದೇ ಸ್ಪಷ್ಟತೆ ಸಿಗಲಿಲ್ಲ. ರಾಜ್ಯದ ರೈತರು ಭರವಸೆಯಿಂದ ಕಾಯುತ್ತಿದ್ದಾರೆ. ಚುನಾವಣಾ ಪೂರ್ವ ನೀಡಿದ್ದ ಆಶ್ವಾಸನೆಯನ್ನು ಮುಖ್ಯಮಂತ್ರಿ ಈವರೆಗೂ ಈಡೇರಿಸಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್, ಎಲ್ಲರೂ ರೈತರ ಸಾಲ ಮನ್ನಾ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಸಾಲಮನ್ನಾ ನಂತರ ಮುಂದೇನು? ಮತ್ತೆ ರೈತರಿಗೆ ಸಾಲ ಕೊಟ್ಟು ಮತ್ತೆ ಮನ್ನಾ ಮಾಡುವುದು ಫ್ಯಾಷನ್ ಆಗುವುದು ಬೇಡ. ನಾವೆಲ್ಲರೂ ರೈತ ಕುಟುಂಬದಿಂದಲೇ ಬಂದಿರುವವರು. ರೈತರು ತಮ್ಮ ಸಾಲ ತಾವೇ ತೀರಿಸುವಂತೆ ಸಶಕ್ತರಾಗಲು ಏನು ಮಾಡಬೇಕು ಎಂಬ ಬಗ್ಗೆ ಯಾರೂ ವಾತನಾಡುತ್ತಿಲ್ಲ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಲು ಮತ್ತೆ ಎದ್ದು ನಿಂತ ಶ್ರೀರಾಮುಲು, ಮುಖ್ಯಮಂತ್ರಿ ಇಸ್ರೇಲ್‌ನ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸಿ ಸಂಪೂರ್ಣವಾಗಿ ಕೃಷಿ ಪದ್ಧತಿಯನ್ನು ಬದಲಾಯಿಸುತ್ತೇನೆ ಎಂದಿದ್ದರು. ಸಾಲಮನ್ನಾ ಮಾಡಿದ ನಂತರ ಅದನ್ನು ಅನುಷ್ಠಾನಕ್ಕೆ ತಂದರೆ ಕೃಷಿ ಪದ್ಧತಿ ಸುಧಾರಿಸಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News