ಚುನಾವಣೆಯಲ್ಲಿ ಕಳಂಕಿತರಿಗೆ ಟಿಕೆಟ್ ಬೇಡ: ಎಸ್‌ಡಿಪಿಐ

Update: 2018-07-04 15:33 GMT

ಬೆಂಗಳೂರು, ಜು.4: ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಪಕ್ಷವಾದರೂ, ಕಳಂಕಿತರಿಗೆ ಟಿಕೆಟ್ ನೀಡಬಾರದೆಂದು ಎಸ್‌ಡಿಪಿಐ ಆಗ್ರಹಿಸಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಕೆಲವು ರಾಜಕಾರಣಿಗಳು ಧರ್ಮ, ಜಾತಿ, ಭಾಷೆ ವಿಚಾರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ ಸಂಘರ್ಷ ಉಂಟುಮಾಡುತ್ತಿದ್ದಾರೆ. ಜೊತೆಗೆ ಭೂಹಗರಣ, ಗಣಿ ಹಗರಣ, ಪರಿಸರ ನಾಶದಂತಹ ಗಂಭೀರ ಪ್ರಕರಣಗಳಲ್ಲಿ ಕೆಲವು ರಾಜಕಾರಣಿಗಳು ಆರೋಪಿಗಳಾಗಿದ್ದಾರೆ. ಇಂತಹ ಕಳಂಕಿತರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು.

ಇವಿಎಂ ನಿಷೇಧಿಸಿ: ಚುನಾವಣೆಗಳಲ್ಲಿ ಇವಿಎಂ ಯಂತ್ರಗಳ ದುರ್ಬಳಕೆಯಾಗುತ್ತಿರುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ, ವಿಧಾನಸಭೆ, ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಯಂತ್ರಗಳನ್ನು ನಿಷೇಧಿಸಬೇಕು. ಸಂವಿಧಾನದ ಆಶಯದಂತೆ ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನ ನಡೆಸಲು ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದರು.

ಜಾತಿಗಣತಿ ಬಹಿರಂಗಪಡಿಸಿ: ರಾಜ್ಯದ ಎಲ್ಲ ಜನಸಮುದಾಯದವರಿಗೆ ಸಮಾನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ, ಈ ಹಿಂದೆ ರಾಜ್ಯ ಸರಕಾರದಿಂದ ನಡೆಸಿದ್ದ ಜಾತಿವಾರು ಹಾಗೂ ಆರ್ಥಿಕ ಜನಗಣತಿಯನ್ನು ಬಹಿರಂಗಪಡಿಸಬೇಕು. ಇದರಿಂದಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ, ಅವಕಾಶ ವಂಚಿತರಿಗೆ ಸರಕಾರದ ಯೋಜನೆಗಳು ಮತ್ತು ಅನುದಾನ ಬಿಡುಗಡೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಮಾಫಿಯಾ ನಿಯಂತ್ರಿಸಿ: ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಆಂಗ್ಲ ಮಾಧ್ಯಮ ಶಾಲೆಗಳು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ, ಹೆಚ್ಚೆಚ್ಚು ಡೊನೇಷನ್ ವಸೂಲಿ ಮಾಡುವುದರ ಜೊತೆಗೆ, ವಿದ್ಯಾರ್ಥಿಗಳನ್ನು ಶೋಷಣೆ ಮಾಡುತ್ತಿವೆ. ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿ ಅಕ್ರಂ ಹಸನ್, ಕೋಶಾಧಿಕಾರಿ ಜಾವೇದ್ ಆಝಾಂ, ಅಪ್ಸರ್ ಕೊಡ್ಲಿಪೇಟೆ, ಗಂಗಪ್ಪ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News