ದಿಲ್ಲಿಯಿಂದ ಅನುದಾನ ತರುವುದು ಒಂದು ಕಲೆ: ಸ್ಪೀಕರ್ ರಮೇಶ್‌ ಕುಮಾರ್

Update: 2018-07-04 15:35 GMT

ಬೆಂಗಳೂರು, ಜು. 4: ‘ಕೇಂದ್ರ ಸರಕಾರದಿಂದ ಅನುದಾನ ತರುವುದು ಒಂದು ಕಲೆ. ಆ ಕಲೆ ಕರಗತ ಆಗಿರುವವರಿಗೆ ಮಾತ್ರವೇ ಅನುದಾನ ಸಿಗುತ್ತದೆ’ ಎಂದು ಸ್ಪೀಕರ್ ರಮೇಶ್‌ ಕುಮಾರ್ ಹೇಳಿದ್ದು, ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.

ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಬಿಜೆಪಿ ಹಿರಿಯ ಸದಸ್ಯ ಗೋವಿಂದ ಕಾರಜೋಳ, ಕೇಂದ್ರದಿಂದ ಹೆಚ್ಚಿನ ಅನುದಾನ ಬರುತ್ತಿದೆ. ಆದರೂ, ರಾಜ್ಯಪಾಲರ ಭಾಷಣದಲ್ಲಿ ಈ ವಿಷಯ ಪ್ರಸ್ತಾಪ ಮಾಡಿಲ್ಲ ಎಂದು ಆಕ್ಷೇಪಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಕೇಂದ್ರ ಸರಕಾರ 7 ಸಾವಿರ ಕೋಟಿ ರೂ. ಮಂಜೂರು ಮಾಡಿದೆ. ಆದರೆ, ವಾರ್ಷಿಕ 500 ಕೋಟಿ ರೂ.ಗಳನ್ನಷ್ಟೇ ನೀಡುತ್ತದೆ. ಸಂಪೂರ್ಣ ಹಣ ಬಿಡುಗಡೆ ಆಗಲು ಇನ್ನೂ 15 ವರ್ಷಗಳು ಬೇಕಾಗುತ್ತದೆ. ಕೇವಲ 2,500 ಕೋಟಿ ರೂ.ಯೋಜನೆಗಳಿಗೆ ಕೇಂದ್ರ ಕಾರ್ಯಾದೇಶ ನೀಡಿದೆ, ಕೇಂದ್ರದಿಂದ 496 ಕೋಟಿ ರೂ.ಮೊತ್ತದ ಬಿಲ್ ಬಾಕಿ ಇದೆ. ಹೀಗಾದರೆ ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿಗೆ ಹೇಗೆ ಸಾಧ್ಯ ಎಂದು ಕೇಂದ್ರ ಸರಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸ್ಪೀಕರ್ ರಮೇಶ್‌ ಕುಮಾರ್, ನನ್ನ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸಿಆರ್‌ಎಫ್‌ನಡಿ 19ಕೋಟಿ ರೂ. ಅನುದಾನ ಕೋರಿ ದಿಲ್ಲಿಗೆ ಹೋಗಿದ್ದೆ. ಕೇಂದ್ರ ಸಚಿವ ಅನಂತಕುಮಾರ್ ಮೂಲಕ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ಮನವಿ ಮಾಡಿದರೂ ಅನುದಾನ ಬರಲಿಲ್ಲ. ದಿಲ್ಲಿಯಿಂದ ಅನುದಾನ ತರುವುದು ಒಂದು ಕಲೆ, ಕಲೆ ಗೊತ್ತಿರುವವರಿಗಷ್ಟೇ ಅನುದಾನ ಸಿಗುತ್ತೆ ಎಂದು ತಮ್ಮ ಅನುಭವ ಬಿಚ್ಚಿಟ್ಟರು.

ಸಭಾಧ್ಯಕ್ಷರ ಕ್ಷೇತ್ರದ ಬಗ್ಗೆ ಕರುಣೆ ಇರಲಿ: ಲೋಕೋಪಯೋಗಿ ಸಚಿವರಿಗೆ ಕಲೆ ಕರಗತವಾಗಿದ್ದು, ಅವರು ಒಂದು ರೀತಿಯಲ್ಲಿ ಸಕಲ ಕಲಾವಲ್ಲಭರಿದ್ದಂತೆ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಮಸಾಲೆ ಬೆರೆಸಿದರು. ಈ ವೇಳೆ ಮಾತನಾಡಿದ ರಮೇಶ್‌ ಕುಮಾರ್, ಅನುದಾನ ಬಿಡುಗಡೆ ಸಾರ್ವಜನಿಕರ ಹಿತವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಆದರೆ, ನಾನು ಸಭಾಧ್ಯಕ್ಷ. ಹೀಗಾಗಿ ನನ್ನ ಕ್ಷೇತ್ರದ ಮೇಲೆಯೂ ಸ್ವಲ್ಪ ಕರುಣೆ ಇರಲಿ ಎಂದು ಹಾಸ್ಯದ ದಾಟಿಯಲ್ಲೇ ಸರಕಾರಕ್ಕೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News