ಶಾಸಕರ ನಿಧಿ ಸದ್ಬಳಕೆಯಾಗದಿರಲು ಅಧಿಕಾರಿಗಳೇ ಕಾರಣ: ಕೋಟಾ ಶ್ರೀನಿವಾಸ ಪೂಜಾರಿ

Update: 2018-07-04 15:38 GMT

ಬೆಂಗಳೂರು, ಜು.4: ಶಾಸಕರಿಗೆ ಒದಗಿಸಿದ 439 ಕೋಟಿ ರೂ. ಅನುದಾನ ಸರಕಾರಕ್ಕೆ ವಾಪಾಸ್ ಆಗಲು ಶಾಸಕರು ಕಾರಣರಲ್ಲ. ಅಧಿಕಾರಿಗಳೇ ಇದರ ಹೊಣೆ ಹೊರಬೇಕು ಎಂದು ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಬುಧವಾರ ನಿಯಮ 72ರ ಅಡಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಹುದ್ದೆಗಳಿಗೆ ಸಂಬಂಧಪಟ್ಟಂತೆ ಪ್ರಸ್ತಾಪಿಸಿದ ವಿಷಯಕ್ಕೆ ಸಚಿವ ಕೃಷ್ಣಭೈರೇಗೌಡ ಅವರು ಉತ್ತರ ನೀಡುವ ವೇಳೆ ಮಧ್ಯೆಪ್ರವೇಶಿಸಿ ಶಾಸಕರು ಬಿಡುಗಡೆ ಮಾಡುವ ಅನುದಾನಕ್ಕೆ ಅಧಿಕಾರಿಗಳು ಕೊಕ್ಕೆ ಹಾಕುತ್ತಾರೆ ಎಂದು ಆರೋಪಿಸಿದರು.

ವಿಧಾನಸಭೆ ಮತ್ತು ವಿಧಾನ ಪರಿಷತ್ ಮನೆಗಳಲ್ಲಿ ಕಾಯಿದೆಯನ್ನು ರೂಪಿಸುವವರು ನಾವೇ. ನಮಗೆ ದೊರೆತ ಅನುದಾನವನ್ನು ಖರ್ಚು ಮಾಡಲು ಆಗುವುದಿಲ್ಲ ಎಂದರೆ ಹೇಗೆ? ನಿಷೇಧಿತ ಕಾಮಗಾರಿ, ಅನುಮೋದಿತ ಕಾಮಗಾರಿ ಎಂದು ವಿಂಗಡಿಸುವ ಅಧಿಕಾರಿಗಳು ಎ.ಸಿ. ರೂಮಿನಲ್ಲಿ ಕುಳಿತು ಅನುದಾನದ ಬಳಕೆಗೆ ಮಾರ್ಗಸೂಚಿ ನೆಪವೊಡ್ಡಿ ಖರ್ಚು ಮಾಡಲು ಬಿಡುವುದಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಶಾಸಕರ ಅನುದಾನ ಯೋಜನೆ ಇಲಾಖೆಯ ವ್ಯಾಪ್ತಿಗೆ ಬರಲಿದೆ. ನನಗೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಅನುದಾನಗಳ ಬಳಕೆಗೆ ಏಕೆ ತಕರಾರು ಹಾಕುತ್ತಿದ್ದಾರೆ ಎಂದು, ವಿವರಣೆ ಕೇಳುತ್ತೇನೆ ಎಂದರು.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಮಾಡಿಕೊಳ್ಳುವ ಸಂಬಂಧ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. 6ನೇ ವೇತನ ಆಯೋಗದ ಶಿಫಾರಸ್ಸಿನಂತೆ 10 ಸಾವಿರ ಕೋಟಿ ಹೆಚ್ಚುವರಿಯಾಗಿ ವೇತನ ನೀಡಬೇಕಿದೆ. ಹೀಗಾಗಿ, ಇದನ್ನು ಗಮನದಲ್ಲಿಟ್ಟುಕೊಂಡು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News