ಬೀದಿಗೆ ಬೀಳಿಸಲಿರುವ ಹೊಸ ಕಾನೂನು: ಚಿಲ್ಲರೆ ವ್ಯಾಪಾರಿಗಳ ಆಕ್ರೋಶ

Update: 2018-07-04 16:48 GMT

ಬೆಂಗಳೂರು, ಜು.4: ಹೊಸ ಕಾನೂನು ಜಾರಿಗೊಳಿಸಿ ಬೀದಿಗೆ ಬೀಳುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಚಿಲ್ಲರೆ ವ್ಯಾಪಾರಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬುಧವಾರ ನಗರದ ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೆ ‘ಅಖಿಲ ಭಾರತ ಸಣ್ಣ ವ್ಯಾಪಾರಿಗಳ ಸಂಘ’ದ ನೇತೃತ್ವದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ, ಕೆಲ ಎನ್‌ಜಿಓಗಳು ಸರಕಾರಕ್ಕೆ ತಪ್ಪು ವರದಿ ನೀಡಿವೆ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬೀಡಿ ಸಿಗರೇಟು ಮಾರಾಟಗಾರರ ಸಂಘದ ಅಧ್ಯಕ್ಷ ಬಿ.ಎನ್.ಮುರಳಿಕೃಷ್ಣ, ರಾಜ್ಯದಲ್ಲಿ 3 ಲಕ್ಷ ಜನ ಬೀದಿ ಬದಿಯ ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಬಹುರಾಷ್ಟ್ರೀಯ ಕಂಪೆನಿಗಳಿಂದ ಹಣ ಪಡೆಯುವ ಎನ್‌ಜಿಓಗಳು ಚಿಲ್ಲರೆ ವ್ಯಾಪಾರಿಗಳ ಬಗ್ಗೆ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ, ಸಣ್ಣ ವ್ಯಾಪಾರಿಗಳ ಮೇಲೆ ಇಲ್ಲಸಲ್ಲದ ಕಾನೂನು ಹೇರಿಕೆ ಮಾಡುವುದಕ್ಕೆ ಒತ್ತಾಯಿಸುತ್ತಿವೆ. ಈ ಬಗ್ಗೆ ಕೇಂದ್ರ ಸರಕಾರ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.

ಬ್ರೆಡ್, ಮೊಟ್ಟೆ, ತಂಪುಪಾನೀಯ ಸೇರಿದಂತೆ ಆಹಾರ ಉತ್ಪನ್ನಗಳನ್ನು ಸಣ್ಣ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬಹುರಾಷ್ಟ್ರೀಯ ಕಂಪೆನಿಗಳ ಉತ್ಪನ್ನದ ಮಾರಾಟಕ್ಕೆ ಸ್ಪರ್ಧೆ ಏರ್ಪಡುತ್ತಿದೆ. ಹೀಗಾಗಿ, ಸಣ್ಣ ವ್ಯಾಪಾರಿಗಳನ್ನು ಕಾನೂನಾತ್ಮಕವಾಗಿ ಮಣಿಸಬೇಕೆಂಬ ಉದ್ದೇಶದಿಂದ ಎನ್‌ಜಿಓಗಳನ್ನು ಬಳಸಿಕೊಂಡು ಈ ರೀತಿಯ ಹುನ್ನಾರಗಳನ್ನು ಮಾಡಿ ಸರಕಾರದ ಮೇಲೆ ಒತ್ತಡಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News