ಬೆಂಗಳೂರು: ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಧರಣಿ
Update: 2018-07-04 23:01 IST
ಬೆಂಗಳೂರು, ಜು.4: ಹಾಲಿನ ದರವನ್ನು ಏಕಾಏಕಿ 2 ರೂ. ಕಡಿಮೆಗೊಳಿಸಿ, ರೈತ ವಿರೋಧಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರ ನಡೆದುಕೊಂಡಿದೆ ಎಂದು ಆರೋಪಿಸಿ ರೈತ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಹೊಸೂರು ರಸ್ತೆಯ ಡೈರಿ ವೃತ್ತದ ಬಳಿಯ ಬೆಂಗಳೂರು ಹಾಲಿನ ಮಂಡಳಿ ಎದುರು ಜಮಾಯಿಸಿದ ಹೋರಾಟಗಾರರು, ಹಸಿವಿನಿಂದ ಹಾಲು ಕರೆಯುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಈ ಹಿಂದೆಯಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ ಒಂದು ಲೀಟರ್ ಹಾಲಿಗೆ ಕೆಎಂಎಫ್‌ನಿಂದ ರೈತರಿಗೆ 21ರೂ. ನೀಡುತಿತ್ತು. ಆದರೆ ಈಗ 2 ರೂ. ಕಡಿತಗೊಳಿಸಿರುವುದು ಸರಿಯಲ್ಲ. ಇದರಿಂದ ರೈತರಿಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದಿನ ದರವನ್ನೇ ನೀಡಲು ಮುಂದಾಗಬೇಕು. ಇಲ್ಲದಿದ್ದರೆ, ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.