×
Ad

ಕಾಂಗ್ರೆಸ್ ಮುಲಾಜಿನ ಬಜೆಟ್ ಎಂಬುದು ಸಾಬೀತು: ಯಡಿಯೂರಪ್ಪ

Update: 2018-07-05 22:29 IST

ಬೆಂಗಳೂರು, ಜು. 5: ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಆರೂವರೆ ಕೋಟಿ ಜನರ ಮುಲಾಜಿನಲ್ಲಿಲ್ಲ. ಬದಲಿಗೆ ಕಾಂಗ್ರೆಸ್ ಮುಲಾಜಿನಲ್ಲಿರುವುದು ಅವರಿಂದು ಮಂಡಿಸಿರುವ ಬಜೆಟ್ ಮೂಲಕ ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಗುರುವಾರ ಸಿಎಂ ಬಜೆಟ್ ಮಂಡನೆ ಬಳಿಕ ವಿಧಾನಸಭೆ ಮೊಗಸಾಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ಒತ್ತಡಗಳನ್ನು ಮೀರಿ, ಜನಪರ ಬಜೆಟ್ ಮಂಡನೆ ಮಾಡಲು ಕುಮಾರಸ್ವಾಮಿಗೆ ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಆಗ್ರಹಿಸುತ್ತಾರೆ. ಆದರೆ, ರಾಜ್ಯದಲ್ಲಿ ಮೈತ್ರಿ ಸರಕಾರ ಪೆಟ್ರೊಲ್, ಡೀಸೆಲ್ ಮೇಲೆ ಶೇ.2ರಷ್ಟು ಏರಿಕೆ ಮಾಡಿದೆ. ಹಿಂದಿನ ಸರಕಾರದ ಯೋಜನೆ ಮುಂದುವರಿಸುವ ಘೋಷಣೆ ಮಾಡುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ, ದೂರದರ್ಶಿತ್ವವಿಲ್ಲದ ಪುನರಾವರ್ತನೆ ಬಜೆಟ್ ಆಗಿದೆಯಷ್ಟೇ ಎಂದರು.

ಪ್ರಾದೇಶಿಕ ತಾರತಮ್ಯ, ಅಲ್ಪಸಂಖ್ಯಾತರ ನಿರ್ಲಕ್ಷ್ಯದ ಕಾರಣಕ್ಕೆ ಕಾಂಗ್ರೆಸ್ ಶಾಸಕರು ಬಜೆಟ್‌ಗೆ ವಿರೋಧಿಸಿದ್ದಾರೆಂದ ಅವರು, ಕರಾವಳಿ, ಉತ್ತರ ಕರ್ನಾಟಕ ಸಂಪೂರ್ಣ ಕಡೆಗಣಿಸಲಾಗಿದೆ. ಇದು ಒಂದು ರೀತಿಯಲ್ಲಿ ಅಣ್ಣ-ತಮ್ಮನ ಬಜೆಟ್ ಆಗಿದೆ ಎಂದು ಟೀಕಿಸಿದರು.

ನೀರಾವರಿ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ದ ಕುಮಾರಸ್ವಾಮಿ, ಅವಕಾಶ ಸಿಕ್ಕರೂ ನೀರಾವರಿಗೆ ಆದ್ಯತೆ ನೀಡಿಲ್ಲ ಎಂದು ಟೀಕಿಸಿದ ಅವರು, ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬರೆ ಎಳೆದು, ಅವರ ಸಂಕಷ್ಟಗಳನ್ನು ಹೆಚ್ಚಿಸಲಿದೆ ಎಂದು ನುಡಿದರು.

ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸುವ ಅಕ್ಕಿ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಲಾಗಿದೆ. ವಿದ್ಯುತ್ ದರ ಪ್ರತಿ ಯೂನಿಟ್‌ಗೆ 20ಪೈಸೆ ಹೆಚ್ಚಳ ಮಾಡಿದ್ದು, ಇದು ಬಡ-ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ ಎಂದ ಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಕೂಡ ಪ್ರಾಮಾಣಿಕವಾಗಿಲ್ಲ ಎಂದರು.

ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿ ಈಗ 2017ರ ಡಿಸೆಂಬರ್ 31ರ ವರೆಗೆ ಅನ್ವಯವಾಗುವಂತೆ 2 ಲಕ್ಷ ರೂ.ವರೆಗೆ ರೈತರ ಸುಸ್ಥಿ ಸಾಲಮನ್ನಾ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳ ಎಷ್ಟು ರೈತರ ಸಾಲ, ಸಹಕಾರಿ ಸಂಘಗಳ ಎಷ್ಟು ರೈತರ ಸಾಲಮನ್ನಾ ಆಗಲಿದೆ ಎಂಬ ವಿವರ ನೀಡಿಲ್ಲ. ಹಿರಿಯ ನಾಗರಿಕರಿಗೆ ಮಾಸಾಶನ ನೀಡುವ, ಬಡ ಮಹಿಳೆಯರಿಗೆ 2 ಸಾವಿರ ರೂ.ಕುಟುಂಬ ನಿರ್ವಹಣಾ ಭತ್ತೆ ನೀಡುವುದು ಸೇರಿ ಇನ್ನಿತರ ಆಶ್ವಾಸನೆಗಳನ್ನು ಎಚ್‌ಡಿಕೆ ಮರೆತಿದ್ದಾರೆಂದ ಅವರು, ಕೇವಲ ಸ್ವಹಿತದ ರಾಜಕೀಯ ಕಾರಣಗಳಿಗಾಗಿ ಈ ಬಜೆಟ್ ಮಂಡಿಸಲಾಗಿದೆ. ಇದರಲ್ಲಿ ರಾಜ್ಯದ ಅಭಿವೃದ್ಧಿಯ ಮುನ್ನೋಟ ಅಥವಾ ಇಚ್ಛಾಶಕಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಣ್ಣ-ತಮ್ಮನ ಆಯವ್ಯಯ
‘ಮೈತ್ರಿ ಸರಕಾರದ ಚೊಚ್ಚಲ ಬಜೆಟ್ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣನ ಬಜೆಟ್‌ನಂತಿದ್ದು, ಇದು ಒಂದು ರೀತಿ ಅಣ್ಣ-ತಮ್ಮಂದಿರ ಆಯವ್ಯಯ. 34 ಸಾವಿರ ಕೋಟಿ ರೂ.ಸಾಲಮನ್ನಾ ಘೋಷಿಸಿದ್ದರೂ, ಅದಕ್ಕೆ ಹಣ ಎಲ್ಲಿಂದ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿಲ್ಲ.
ಸರಕಾರದ ಒಟ್ಟಾರೆ ಸಾಲದ ಪ್ರಮಾಣ ಹೆಚ್ಚಾಗಿದೆ. ಇದೀಗ ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಿಸಲಾಗಿದೆ. ಜತೆಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಲಾಗಿದೆ. 6 ಸಾವಿರ ಕೋಟಿ ರೂ.ಸಾಲಮನ್ನಾ ಮೊತ್ತಕ್ಕೆ ಮಾತ್ರ ಅನುದಾನ ತೋರಿಸಲಾಗಿದೆ. ಉಳಿದ ಹಣವನ್ನು ಎಲ್ಲಿಂದ ತರುತ್ತಾರೆ. ಇದು ರೈತರ ಕಣ್ಣಿಗೆ ಮಣ್ಣು ಎರಚಿರುವ ಬಜೆಟ್’
-ಬಿ.ಎಸ್.ಯಡಿಯೂರಪ್ಪ ವಿಧಾನಸಭೆ ವಿಪಕ್ಷ ನಾಯಕ

‘ಸಿಎಂ ಕುಮಾರಸ್ವಾಮಿ ಕೇವಲ ಮಂಡ್ಯ, ಹಾಸನಕ್ಕೆ ಮಾತ್ರ ಬಜೆಟ್ ಮಂಡನೆ ಮಾಡಿದ್ದಾರಾ? ಇಡೀ ರಾಜ್ಯಕ್ಕೆ ಮೈತ್ರಿ ಆಡಳಿತ ನಡೆಯುತ್ತದೆಯೋ ಎಂಬ ಸಂಶಯ ಸೃಷ್ಟಿಯಾಗಿದೆ. ಈ ಬಜೆಟ್ ರಾಜ್ಯದ ಎಲ್ಲ ವರ್ಗದ ಜನರಿಗೆ ದೋಖಾ ಮಾಡಲಾಗಿದೆ. ನೇಕಾರರ, ಹಿಂದುಳಿದವರಿಗೆ ಏನು ಇಲ್ಲ. ಜನರಿಗೆ ಅನ್ಯಾಯ ಆಗಿದೆ. ಸಿಎಂ ಆಗಬೇಕಿತ್ತೆಂಬ ಆಸೆ ತೀರಿಸಿಕೊಂಡಿದ್ದು, ಬಿಟ್ಟರೆ ರಾಜ್ಯದ ಜನತೆಗೆ ಯಾವುದೇ ನಿರೀಕ್ಷೆ ಹುಸಿಯಾಗಿದೆ’
-ಕೆ.ಎಸ್.ಈಶ್ವರಪ್ಪ ಬಿಜೆಪಿ ಮುಖಂಡ

ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಒಗ್ಗೂಡಿಸಿ ಮಂಡಿಸಿರುವ ಬಜೆಟ್ ಇದಾಗಿದೆ. ಸಮನ್ವಯ ಸಮಿತಿಯಲ್ಲಿ ಬಜೆಟ್ ಮಂಡನೆಗೆ ಒಪ್ಪಿಗೆ ನೀಡಲಾಗಿತ್ತು. ರೈತರ ಸಾಲ ಮನ್ನಾ ಮಾಡುವ ತೀರ್ಮಾನವನ್ನು ಎರಡು ಪಕ್ಷಗಳು ಕೈಗೊಂಡಿದ್ದವು. ಹಿಂದಿನ ಸರಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಎಸ್ಸಿ-ಎಸ್ಟಿಗಳು ಸೇರಿದಂತೆ ಎಲ್ಲರಿಗೆ ಜಾರಿಗೆ ತಂದ ಕಾರ್ಯಕ್ರಮಗಳು, ಘೋಷಿಸಿದ ಯೋಜನೆಗಳು ಮುಂದುವರೆಯಲಿವೆ. ರೈತರ ಸಾಲ ಮನ್ನಾ ಮಾಡಲು ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಕೆಲವು ಹೊಸ ತೆರಿಗೆಗಳನ್ನು ಪರಿಚಯಿಸಲಾಗಿದೆ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News