ಆಭರಣ, ಆದಾಯ ತೆರಿಗೆದಾರರ ಸಾಲಮನ್ನಾ ಇಲ್ಲ: ಸರಕಾರದ ಮಾರ್ಗಸೂಚಿ ಪ್ರಕಟ

Update: 2018-07-05 17:19 GMT

ಬೆಂಗಳೂರು, ಜು. 5: ರಾಜ್ಯದಲ್ಲಿನ ರೈತರ ಪ್ರತಿ ಕುಟುಂಬಕ್ಕೆ ಗರಿಷ್ಠ 2 ಲಕ್ಷ ರೂ.ವರೆಗಿನ ಸುಸ್ತಿ ಸಾಲಗಳಿಗೆ ವಿನಾಯಿತಿ ನೀಡಲಿದ್ದು, ರೈತ, ಆತನ ಪತ್ನಿ ಮತ್ತು ಅವಲಂಬಿತ ಮಕ್ಕಳು 2009 ಎಪ್ರಿಲ್ 1ರಿಂದ ತೆಗೆದುಕೊಂಡ ಮತ್ತು 2017ರ ಡಿಸೆಂಬರ್ 31ರ ವರೆಗೆ ಬಾಕಿಯಿರುವ ಅವಧಿ ಮೀರಿದ ಬೆಳೆ ಸಾಲ, ಈ ಸಾಲ ಮನ್ನಾ ಯೋಜನೆ ಅನ್ವಯಿಸಲಿದೆ.

ಸಾಲಮನ್ನಾಕ್ಕೆ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ವೈಯಕ್ತಿಕ ರೈತ/ಹಿಂದೂ ಅವಿಭಾಜ್ಯ ಕುಟುಂಬಗಳನ್ನು ಹೊರತುಪಡಿಸಿ ಎಲ್ಲ ಕಾನೂನು ಬದ್ಧ ಸಂಸ್ಥೆಗಳಿಗೆ, ರೈತರಿಗೆ ನೀಡಲಾದ ಒಡವೆ/ ಆಭರಣ ಸಾಲ, ಟ್ರಸ್ಟ್‌ಗಳು, ಪಾಲುದಾರಿಕೆಗಳು, ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್/ ನಗರ ಸಹಕಾರ ಬ್ಯಾಂಕುಗಳಿಂದ ನೀಡಲಾದ ಸಾಲ ಈ ಯೋಜನೆಗೆ ಒಳಪಡುವುದಿಲ್ಲ.

4ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಹೊಂದಿರುವ ಆದಾಯ ತೆರಿಗೆ ಪಾವತಿದಾರರು ಪಡೆದ ಬೆಳೆ ಸಾಲ, ವಾಹನ ಖರೀದಿಗಾಗಿ ಮತ್ತಿತರ ಆದ್ಯತೆಯಲ್ಲದ ಸಾಲ, ಕೃಷಿ ಉತ್ಪನ್ನಗಳನ್ನು ಅಡವಿಟ್ಟುಕೊಂಡು ನೀಡಿದ ಸಾಲ, ಕೇಂದ್ರ, ರಾಜ್ಯ ಸರಕಾರ ಅಥವಾ ಅಂಗಸಂಸ್ಥೆ, ಅರೆ ಸರಕಾರಿ ಸಂಸ್ಥೆ, ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ಬ್ಯಾಂಕು, ಶೈಕ್ಷಣಿಕ ಸಂಸ್ಥೆಗಳ ಉದ್ಯೋಗಗಳಿಗೆ ನೀಡಿದ ಸಾಲಗಳು ಮನ್ನಾ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ.

ಸಂಚಿತ ನಿಧಿಯಿಂದ ಮಾಸಿಕ 15ಸಾವಿರ ರೂ.ಗಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವ ನಿವೃತ್ತಿ ವೇತನದಾರರಿಗೆ ನೀಡಿರುವ ಬೆಳೆ ಸಾಲ, ಸ್ವಸಹಾಯ ಗುಂಪುಗಳು ಪಡೆದ ಸಾಲ, ಕಂಟ್ರಾಕ್ಟ್ ಫಾರ್ಮಿಂಗ್‌ಗಾಗಿ ಪಡೆದ ಸಾಲ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಕೃಷಿ ಸಂಬಂಧಿತ ಇತರೆ ಸಾಲ, ಸಾಲದ ಮೊತ್ತವನ್ನು ದುರ್ಬಳಕೆ ಮಾಡಿದ ಅಥವಾ ನಿಕ್ಷೇಪಗಳಲ್ಲಿ ಠೇವಣಿ ಮಾಡಲಾಗಿರುವ ಸಾಲ, ವಂಚನೆ/ದುರ್ಬಳಕೆ ಒಳಗೊಂಡ ಸಾಲಗಳು ಸರಕಾರದ ಸಾಲಮನ್ನಾ ಯೋಜನೆಗೆ ಒಳಪಡುವುದಿಲ್ಲ ಎಂದು ಸರಕಾರ ಮಾರ್ಗಸೂಚಿ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News