ಮಲ್ಯ ವಿರುದ್ಧ ಬ್ರಿಟನ್ ನ್ಯಾಯಾಲಯದ ಆದೇಶಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ವಾಗತ

Update: 2018-07-06 14:47 GMT

ಹೊಸದಿಲ್ಲಿ,ಜು.6: ದೇಶಭ್ರಷ್ಟ ಮದ್ಯದ ದೊರೆ ವಿಜಯ ಮಲ್ಯಗೆ ಸೇರಿದ ಆಸ್ತಿಗಳ ಶೋಧ ಮತ್ತು ಜಪ್ತಿಗೆ ಬ್ರಿಟನ್ ನ್ಯಾಯಾಲಯವು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಆ ರಾಷ್ಟ್ರದಲ್ಲಿರುವ ಅವರ ಒಡೆತನದ ಗರಿಷ್ಠ ಆಸ್ತಿಗಳನ್ನು ವಶಪಡಿಕೊಳ್ಳಲು ಭಾರತೀಯ ಬ್ಯಾಂಕುಗಳು ಬ್ರಿಟನ್ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯಾಚರಿಸುತ್ತಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ)ನ ಆಡಳಿತ ನಿರ್ದೇಶಕ ಅರಿಜಿತ್ ಬಸು ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನ್ಯಾಯಾಲಯದ ಆದೇಶವು ನಮಗೆ ಸಂತಸವನ್ನು ನೀಡಿದೆ. ಇಂತಹ ಆದೇಶದಿಂದ ಮಲ್ಯರ ಆಸ್ತಿಯನ್ನು ವಶಪಡಿಸಿಕೊಳ್ಳಲು ನಮಗೆ ಸಾಧ್ಯವಾಗಬೇಕು ಎಂದರು.

ನಮ್ಮ ಹಣದ ಗಮನಾರ್ಹ ಮೊತ್ತವನ್ನು ವಶಪಡಿಸಿಕೊಳ್ಳುವ ವಿಶ್ವಾಸ ನಮಗಿದೆ ಎಂದು ಅವರು ಹೇಳಿದರಾದರೂ ನಿರ್ದಿಷ್ಟ ಪ್ರಮಾಣವನ್ನು ಉಲ್ಲೇಖಿಸಲಿಲ್ಲ.

 ಬ್ರಿಟನ್ ನ್ಯಾಯಾಲಯದ ಆದೇಶವು ವಿಶ್ವವ್ಯಾಪಿ ಸ್ತಂಭನ ಆದೇಶವಾಗಿದ್ದು, ಸಂಪೂರ್ಣ ಸಾಲ ಮರುವಸೂಲಿಯನ್ನು ಭಾರತೀಯ ಬ್ಯಾಂಕುಗಳು ನಿರೀಕ್ಷಿಸಿವೆ ಎಂದ ಅವರು,ಇದಕ್ಕಾಗಿ ಬ್ಯಾಂಕುಗಳು ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯಾಚರಿಸುತ್ತಿವೆ ಮತ್ತು ಮೌಲ್ಯಮಾಪಕರನ್ನು ನೇಮಕಗೊಳಿಸಿವೆ ಎಂದು ತಿಳಿಸಿದರು.

ಮಲ್ಯ ಒಡೆತನದ,ಈಗ ನಿಷ್ಕ್ರಿಯವಾಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಾಲ ನೀಡಿದ್ದ 13 ಬ್ಯಾಂಕುಗಳ ಕೂಟದ ನೇತೃತ್ವವನ್ನು ಎಸ್‌ಬಿಐ ವಹಿಸಿಕೊಂಡಿದೆ.

ಭಾರತದಲ್ಲಿ ಮರುವಸೂಲು ಕುರಿತಂತೆ ಬಸು ಅವರು,ಮಲ್ಯ ಅವರ ಭಾರತದಲ್ಲಿನ ಆಸ್ತಿಗಳ ಹರಾಜಿನಿಂದ ಬ್ಯಾಂಕುಗಳ ಕೂಟವು 963 ಕೋ.ರೂ.ಗಳನ್ನು ವಸೂಲಿ ಮಾಡಿದೆ ಎಂದು ತಿಳಿಸಿದರು.

 ಮಲ್ಯ ಹಾಲಿ ವಾಸವಿರುವ ವೆಲ್ವಿನ್‌ನ ಟೆವಿನ್‌ನಲ್ಲಿರುವ ಲೇಡಿವಾಕ್ ಮತ್ತು ಬ್ರಾಂಬ್ಲೆ ಲಾಡ್ಜ್‌ಗೆ ಪ್ರವೇಶಿಸಿ ಶೋಧ ಕಾರ್ಯಾಚರಣೆ ನಡೆಸಲು ಭಾರತೀಯ ಬ್ಯಾಂಕುಗಳ ಅಧಿಕಾರಿಗಳಿಗೆ ಅವಕಾಶ ನೀಡಿ ಬ್ರಿಟನ್ ನ್ಯಾಯಾಲಯವು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News