ಸುಳ್ಳುಸುದ್ದಿಗಳ ತಡೆಗೆ ಹೊಸ ಮಾರ್ಗ ಕಂಡುಕೊಂಡ ವಾಟ್ಸ್‌ಆ್ಯಪ್

Update: 2018-07-06 14:51 GMT

ಕ್ಯಾಲಿಫೋರ್ನಿಯಾ,ಜು.6: ಸುಳ್ಳುಸುದ್ದಿಗಳ ಪ್ರಸಾರವನ್ನು ತಡೆಯಲು ಹೆಣಗಾಡುತ್ತಿರುವ ವಾಟ್ಸ್‌ಆ್ಯಪ್ ಮತ್ತು ಅದರ ಮಾತೃಸಂಸ್ಥೆ ಫೇಸ್‌ಬುಕ್ ಅದಕ್ಕಾಗಿ ಈಗ ಹೊರಗಿನಿಂದ ನೆರವು ಪಡೆದುಕೊಳ್ಳುತ್ತಿವೆ.

ವಾಟ್ಸ್‌ಆ್ಯಪ್ ತನ್ನ ವೇದಿಕೆಯಲ್ಲಿ ಸುಳ್ಳುಸುದ್ದಿಗಳನ್ನು ಅಧ್ಯಯನ ಮಾಡಲು ಮತ್ತು ಸಮಸ್ಯಾತ್ಮಕ ವಿಷಯಗಳನ್ನು ಪತ್ತೆ ಹಚ್ಚಲು ಮಾರ್ಗೋಪಾಯಗಳನ್ನು ಕಂಡು ಹಿಡಿಯಲು ಸಂಶೋಧಕರಿಗೆ 50,000 ಡಾ.ಗಳ ಅನುದಾನವನ್ನು ನೀಡುತ್ತಿದೆ.

ಆದರೆ ವಿಷಯವನ್ನು ವಿಶ್ಲೇಷಿಸುವ ಇಡೀ ಪ್ರಕ್ರಿಯೆಯಲ್ಲಿ ವಾಟ್ಸ್‌ಆ್ಯಪ್ ಯಾವುದೇ ದತ್ತಾಂಶವನ್ನು ಒದಗಿಸುವುದಿಲ್ಲ ಮತ್ತು ಎಲ್ಲ ಅಧ್ಯಯನ ಫಲಿತಾಂಶಗಳು ಸಂಶೋಧಕರ ಸ್ವಾಮಿತ್ವಕ್ಕೊಳಪಟ್ಟಿರುತ್ತವೆ.

ಆನ್‌ಲೈನ್ ಸಂವಾದ ಅಧ್ಯಯನ ಮತ್ತು ಮಾಹಿತಿ ತಂತ್ರಜ್ಞಾನಗಳ ಸಾಕಷ್ಟು ಅನುಭವವನ್ನು ಹೊಂದಿರುವ ವ್ಯಕ್ತಿಗಳು ಮತ್ತು ಈ ಕ್ಷೇತ್ರಗಳಲ್ಲಿ ತಮ್ಮ ಹಾಲಿ ಸಂಶೋಧನೆಯನ್ನು ವಿಸ್ತರಿಸಲು ಬಯಸಿರುವ ವ್ಯಕ್ತಿಗಳಿಂದ ಅರ್ಜಿಗಳನ್ನು ವಾಟ್ಸ್‌ಆ್ಯಪ್ ಆಹ್ವಾನಿಸಿದೆ.

ಕಳೆದೆರಡು ತಿಂಗಳುಗಳಿಂದ ವಾಟ್ಸ್‌ಆ್ಯಪ್ ಮೂಲಕ ಹರಡಲಾಗಿದ್ದ ವದಂತಿಗಳಿಂದ ಭಾರತದಲ್ಲಿ ಅಮಾಯಕರ ಮೇಲೆ ಗುಂಪು ದಾಳಿಗಳು ಹೆಚ್ಚುತ್ತಿವೆ. ಬೇಜವಾಬ್ದಾರಿಯುತ ಮತ್ತು ಸ್ಫೋಟಕ ಸಂದೇಶಗಳ ಹರಡುವಿಕೆಯನ್ನು ತಡೆಯಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಾಟ್ಸ್‌ಆ್ಯಪ್‌ಗೆ ತಾಕೀತು ಮಾಡಿರುವ ಸರಕಾರವು,ಅದು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಾಟ್ಸ್‌ಆ್ಯಪ್ ಸುಳ್ಳುಸುದ್ದಿಗಳು,ತಪ್ಪುಮಾಹಿತಿಗಳು ಮತ್ತು ವದಂತಿಗಳನ್ನು ಸರಕಾರ,ನಾಗರಿಕ ಸಮಾಜ ಮತ್ತು ತಂತ್ರಜ್ಞಾನ ಕಂಪನಿಗಳು ಒಂದಾಗಿ ಶ್ರಮಿಸುವ ಮೂಲಕ ತಡೆಗಟ್ಟಬಹುದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News