ಮಸೀದಿ ಇಸ್ಲಾಂ ಧರ್ಮದ ಅಖಂಡ ಭಾಗ: ಸರ್ವೋಚ್ಚ ನ್ಯಾಯಾಲಯಕ್ಕೆ ನಿವೇದನೆ

Update: 2018-07-07 15:39 GMT

ಹೊಸದಿಲ್ಲಿ,ಜು.7: ಇಸ್ಲಾಂ ಧರ್ಮದಲ್ಲಿ ಮಸೀದಿಯ ಮಹತ್ವಕ್ಕೆ ಒತ್ತು ನೀಡಿದ ಹಿರಿಯ ವಕೀಲ ರಾಜೀವ್ ಧವನ್ ಅವರು,ಮಸೀದಿಯಲ್ಲಿ ಪ್ರಾರ್ಥನೆಗೆ ಮನ್ನಣೆ ನೀಡದಿದ್ದರೆ ಇಸ್ಲಾಂ ಧರ್ಮವು ಕುಸಿಯುತ್ತದೆ ಎಂದು ಶುಕ್ರವಾರ ಬಾಬ್ರಿ ಮಸೀದಿ-ರಾಮ ಮಂದಿರ ಭೂ ವಿವಾದದ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯದಲ್ಲಿ ನಿವೇದಿಸಿದರು.

ಧವನ್ ಅವರು ಅಯೋಧ್ಯೆ ಪ್ರಕರಣದ ಮೂಲ ಕಕ್ಷಿದಾರ ದಿ.ಎಂ.ಸಿದ್ದಿಕಿ ಅವರ ಪರ ವಕೀಲರಾಗಿದ್ದಾರೆ. ಹಾಲಿ ಸಿದ್ದಿಕಿಯವರನ್ನು ಅವರ ಉತ್ತರಾಧಿಕಾರಿ ಪ್ರತಿನಿಧಿಸುತ್ತಿದ್ದಾರೆ.

ಮುಸ್ಲಿಮರು ಪ್ರಾರ್ಥನೆಗಳನ್ನು ಸಲ್ಲಿಸಲು ಮಸೀದಿ ಅತ್ಯಗತ್ಯವಲ್ಲ ಎಂದು ಎತ್ತಿ ಹಿಡಿದಿದ್ದ,ಇಸ್ಮಾಯೀಲ್ ಫಾರೂಕಿ ಪ್ರಕರಣದಲ್ಲಿನ 1994ರ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಧವನ್,ಮಸೀದಿಗಳು ಧರ್ಮದ ಅಖಂಡ ಭಾಗವಾಗಿವೆ ಎಂದು ಇಸ್ಲಾಂ ಹೇಳುತ್ತದೆ ಎಂದು ತಿಳಿಸಿದರು.

 ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಜಾಗವನ್ನು ಸುನ್ನಿ ವಕ್ಫ್ ಮಂಡಳಿ,ನಿರ್ಮೋಹಿ ಅಖಾಡಾ ಮತ್ತು ರಾಮ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಿರುವ ಉಚ್ಚ ನ್ಯಾಯಾಲಯದ ತೀರ್ಪನ್ನು ‘ಪಂಚಾಯತಿ ನಿರ್ಣಯ’ಎಂದು ಧವನ್ ಬಣ್ಣಿಸಿದರು. ಧವನ್ ಬೇಡಿಕೆಯನ್ನು ವಿರೋಧಿಸಿದ,ಪ್ರಕರಣದಲ್ಲಿ ಉತ್ತರ ಪ್ರದೇಶ ಸರಕಾರದ ಪರ ವಕೀಲರಾಗಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಈ ಹಿಂದಿನ ಕಲಾಪಗಳಲ್ಲಿ 1994ರ ತೀರ್ಪನ್ನೆಂದೂ ಪ್ರಶ್ನಿಸಲಾಗಿರಲಿಲ್ಲ. ಹೀಗಿರುವಾಗ ಈಗೇಕೆ ಅದನ್ನು ಚರ್ಚಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಪ್ರಕರಣವನ್ನು ಸಂವಿಧಾನ ಪೀಠಕ್ಕೆ ಒಪ್ಪಿಸುವ ಅಗತ್ಯವಿಲ್ಲ ಮತ್ತು ಅದನ್ನು ಇದೇ ಪೀಠವು ನೇರವಾಗಿ ಆಲಿಸಬೇಕು ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News