ಮರೆತವೇನು ಕಬೀರನ?

Update: 2018-07-07 18:50 GMT

ಕಬೀರ ಕಾಲದೇಶಗಳನ್ನು ಮೀರಿದ ಸಂತ ಕವಿ. ಪ್ರಾಕ್ತನ ಗ್ರಂಥ ಭಂಡಾರಗಳಲ್ಲಿ ಅವನ ಕಾವ್ಯಕೃತಿಗಳು ಹಸ್ತಪ್ರತಿಗಳಲ್ಲಿ ಇಂದಿಗೂ ಲಭ್ಯ. ಕಬೀರನ ದ್ವಿಪದಿಗಳು ಮತ್ತು ಹಾಡುಗಳು ಹೊಸ ಕಾವ್ಯದ ಹರಿಕಾರನಂತೆ ಯುವ ತಲೆಮಾರಿನ ಲೇಖಕರನ್ನು, ಸಾಹಿತ್ಯಾಸಕ್ತರನ್ನು ಆಕರ್ಷಿಸಿದೆ, ಪ್ರಭಾವಿಸಿದೆ. ಇಂದಿಗೂ ಆಕರ್ಷಿಸುತ್ತಿದೆ. ಕಬೀರ, ರಸಿಕರು ಮತ್ತು ವಿದ್ವಾಂಸರಿಬ್ಬರ ಗಮನವನ್ನೂ ಸೆಳೆದಿರುವ ಕವಿಯಾಗಿರುವುದು ಅವನ ಕಾವ್ಯದ ವೈಶಿಷ್ಟ್ಯವಾಗಿದೆ. ಇಂದು ನಾಲ್ಕು ಉಪಖಂಡಗಳಲ್ಲಿ ಕಬೀರನ ಕಾವ್ಯ ಕುರಿತು ವಿಶೇಷ ಅಧ್ಯಯನ ನಡೆದಿದೆ.



ಇಂದಿಗೆ ಐದುನೂರು ವರ್ಷಗಳ ಹಿಂದಿನ ಮಾತು. 1518ರಲ್ಲಿ ಒಂದು ದಿನ. ಸ್ಥಳ: ಉತ್ತರ ಪ್ರದೇಶದ ಮಘರ್. ಸಂತ ಕವಿಯೊಬ್ಬನ ಮರಣವಾಗಿದೆ. ಸಂತನ ಮೃತ ದೇಹದ ಮುಂದೆ ನಿಂತು ಹಿಂದೂ ಮುಸ್ಲಿಮರು ಇಬ್ಬರೂ, ‘‘ಇಂವ ನಮ್ಮವ, ಇಂವ ನಮ್ಮವ, ನಾವು ಇವನ ಸಂಸ್ಕಾರ ಮಾಡಬೇಕು’’ ಎಂದು ಕಚ್ಚಾಡುತ್ತಿದ್ದಾರೆ. ಮರಣಿಸಿರುವವನು ಸಂತ ಕವಿ ಕಬೀರ. ಹಿಂದೂಗಳಿಗೆ ಕಬೀರ ದಾಸ, ಮುಸ್ಲಿಮರಿಗೆ ಕಬೀರ. ಇವರಿಬ್ಬರ ವ್ಯಾಜ್ಯ ನೋಡಿ ಸಂತ ಕವಿಯೇ ಎದ್ದು ಬಂದು, ಶವಕ್ಕೆ ಹೊದಿಸಿರುವ ವಸ್ತ್ರ ತೆಗೆಯುವಂತೆ ಹೇಳಿದನಂತೆ. ತೆಗೆದು ನೋಡಿದಾಗ ಕಚ್ಚಾಡುತ್ತಿದ್ದವರು ಕಂಡದ್ದು ಹೂವುಗಳ ಒಂದು ಪುಟ್ಟರಾಶಿ. ಈ ಹೂವುಗಳಲ್ಲಿ ಅರ್ಧವನ್ನು ಮುಸ್ಲಿಮರು ಕೊಂಡೊಯ್ದು ಮಘರ್‌ನಲ್ಲಿ ಸಮಾಧಿ ಮಾಡಿದರಂತೆ. ಇನ್ನರ್ಧವನ್ನು ಹಿಂದೂಗಳು ಕೊಂಡೊಯ್ದು ಪವಿತ್ರ ವಾರಣಾಸಿಯಲ್ಲಿ ಸಮಾಧಿ ಮಾಡಿದರಂತೆ. ಇದೊಂದು ಕಬೀರನ ನಿಧನ ಕುರಿತ ಐತಿಹ್ಯ.

ಪ್ರಪಂಚಕ್ಕೆ ಮಾನವ ಧರ್ಮದ ಸುವಾಸನೆಯನ್ನು ಬೀರಿದ ಸಂತ ಕವಿ ಕಬೀರ. ನಿರ್ಗುಣ ಪಂಥದ ಶ್ರೇಷ್ಠ ಕವಿ ಕಬೀರ ಹಿಂದೂ ಮುಸ್ಲಿಮರನ್ನು ಟೀಕಿಸುತ್ತಲೇ ನಾವು ಅನುಸರಿಸ ಬೇಕಾದ ಮಾನವ ಧರ್ಮವನ್ನು ವಿಶ್ವಕ್ಕೆ ಸಾರಿದವನು. ಇಂದಿನ ಭಾರತಕ್ಕೆ ಅತ್ಯಂತ ಪ್ರಸ್ತುತನಾಗುವ ಕಬೀರನನ್ನು ನಾವು ಕವಿಯ ಐನೂರನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಹೇಗೆ ಸ್ಮರಿಸುತ್ತಿದ್ದೇವೆ?
***
ಸಂಕಟ ಬಂದಾಗ ವೆಂಕಟರಮಣ ಎನ್ನುವ ರೂಢಿಮಾತು ಜನಸಾಮಾನ್ಯರ ಮಟ್ಟಿಗೆ ಏನೇ ಇರಲಿ, ನಮ್ಮ ರಾಜಕಾರಣಿಗಳ ಮಟ್ಟಿಗಂತೂ ಸತ್ಯಸ್ಯ ಸತ್ಯ. ಚುನಾವಣೆ ಬಂತೆಂದರೆ ಮತದಾರರ ಜಾತಿ-ಧರ್ಮ-ನಂಬಿಕೆ ಜಾತಕಗಳನ್ನು ಜಾಲಾಡಲು ಪ್ರಾರಂಭಿಸುತ್ತಾರೆ. ಅವರು ನಂಬಿದ ದೈವಗಳನ್ನು ಎಳೆದು ತಂದು ಉದ್ಧಾರದ ಮಾತುಗಳನ್ನಾಡುತ್ತಾರೆ. ಈ ಲೋಕದಲ್ಲಲ್ಲವಾದರೂ ಪರಲೋಕದಲ್ಲಿ ನಿಮಗೆ ಮೋಕ್ಷ ಸಿಗುವಂತೆ ಮಾಡುತ್ತೇವೆ ಎಂದು ಅವರು ಮತದಾರರ ನಂಬಿಕೆಯನ್ನು ಶೋಷಿಸುತ್ತಾರೆ. ಇದಕ್ಕೆ ಇತ್ತೀಚಿನ ನಿದರ್ಶನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹದಿನೈದನೆಯ ಶತಮಾನದ ಸಂತ ಕವಿ ಕಬೀರನ ಮೊರೆಹೊಕ್ಕಿರುವುದು. ಉತ್ತರ ಭಾರತದಲ್ಲಿ ಕಬೀರ ಪಂಥ ಎಂಬುದೊಂದಿದೆ. ಸಂತ ಕಬೀರನನ್ನು ನಂಬುವ, ಅವನಿಗೆ ನಡೆದುಕೊಳ್ಳುವ ದಲಿತ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಅರಿತ ಮೋದಿಯವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ದಲಿತ ಭಕ್ತರ ಮತಗಳನ್ನು ಸೆಳೆಯಲು ಅವರು ನಂಬಿರುವ ಸಂತನನ್ನು ಹಾಡಿಹೊಗಳಿದ್ದಾರೆ. ಅವನ ಹೆಸರಿನಲ್ಲಿ ಅಕಾಡಮಿಯೊಂದರ ಸ್ಥಾಪನೆಗೆ ಶಿಲಾನ್ಯಾಸ ಮಾಡಿದ್ದಾರೆ.

ಕಬೀರ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಸ್ಥಾಪಿಸಲೆತ್ನಿಸಿದ ಮಾರ್ಗಪ್ರವರ್ತಕ ಕವಿ. ಕಬೀರ್‌ದಾಸರ ಐದುನೂರನೆಯ ಪುಣ್ಯ ತಿಥಿಯ ವರ್ಷವಿದು. ಕಬೀರನ ಐದುನೂರನೆ ಪುಣ್ಯ ತಿಥಿಗೂ ದೇಶದಲ್ಲಿನ ಸಾರ್ವತ್ರಿಕ ಚುನಾವಣೆಗೂ ತಳಕು ಬಿದ್ದಿರುವುದು ಯೋಗಾಯೋಗವೋ ಏನು ಕಥೆಯೋ ಯೋಗಪ್ರಿಯ ಮೋದಿಯೇ ಹೇಳಬೇಕು. ಕಬೀರ್ (ಕ್ರಿ.ಶ.1398-1518)ಶೈಶವದಲ್ಲೇ ತಂದೆತಾಯಿಗಳಿಂದ ಪರಿತ್ಯಕ್ತನಾಗಿ, ಮುಸ್ಲಿಂ ನೇಕಾರ ದಂಪತಿಯ ಪ್ರೀತಿಯ ಮಡಿಲಲ್ಲಿ ಬೆಳೆದವನು. ಭಕ್ತಿ ಪಂಥದಿಂದ ಆಕರ್ಷಿತನಾಗಿ ಆ ಕಾಲದ ಮಹಾನ್ ಸನ್ಯಾಸಿ ರಮಾನಂದರ ಶಿಷ್ಯನಾಗಿ ಸಂತನಾದವನು. ಸ್ವಾಮಿ ರಮಾನಂದರು ಮುಲ್ಲಾಗಳು ಮತ್ತು ಬ್ರಾಹ್ಮಣರೊಡನೆ ನಡೆಸುತ್ತಿದ್ದ ಧರ್ಮ ಜಿಜ್ಞಾಸೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಿಕಟ ಪರಿಚಯ ಹೊಂದಿ ಚಿಂತನೆ ನಡೆಸಿದವನು. ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ತತ್ತ್ವಸಾರವಾದ ಮಾನವ ಪ್ರೀತಿಯನ್ನು ಶೋಧಿಸಿ ತೆಗೆದು, ‘‘ಹುಟ್ಟಿನಿಂದೆಲ್ಲೆರದೂ ಒಂದೇ ಜಾತಿ-ಮಾನವ ಜಾತಿ’’ ಎಂಬ ನಿರ್ಣಯಕ್ಕೆ ಬಂದವನು.

ಮಾನವ ಕುಲ ಒಂದೇ ಎಂದು ಜಗತ್ತಿಗೆ ಸಾರಿ, ಜಾತಿ-ಧರ್ಮಗಳ ಅಡ್ಡಗೋಡೆಗಳನ್ನು ಕೆಡವಿ, ಮಾನವ ಪ್ರೀತಿಯ ಏಕತೆಯನ್ನು ಬೋಧಿಸಿದ ಈ ಸಂತ ಹಿಂದಿ ಉಪಭಾಷೆಗಳಾದ ಅವಧೀ ಮತ್ತು ಭೋಜಪುರಿಗಳಲ್ಲಿ ನೂರಾರು, ಸಾವಿರಾರು ತತ್ವಪದಗಳನ್ನು ರಚಿಸಿದ್ದಾನೆ ನಮ್ಮ ಶಿಶುನಾಳ ಶರೀಫರಂತೆ. ಕಬೀರನದು ಮಾನವ ಪ್ರೀತಿಯ ಕಾವ್ಯ. ಮೂರ್ತಿಪೂಜೆ, ಪುರೋಹಿತಶಾಹಿಗಳನ್ನು ವಿರೋಧಿಸಿ, ಸರ್ವಧರ್ಮೀಯರಿಗೂ ಒಬ್ಬನೇ ಆದ ದೇವರು ಎಲ್ಲರಿಗೂ ಮುಕ್ತ, ಅವನ ಕಣ್ಣಲ್ಲಿ ಹಿಂದೂ-ಮುಸ್ಲಿಂ, ಹೆಣ್ಣು-ಗಂಡು ಎಂಬ ಭೇದಭಾವಗಳಿಲ್ಲ ಎಂದು ನಂಬಿದ್ದವನು, ಹಾಗೆ ಬೋಧಿಸಿದವನು.‘‘ಎಲ್ಲ ಜಾತಿಗಳ ಜನ ಪರಮಾತ್ಮನ ನಿಜವಾದ ಭಕ್ತರೇ ಆಗಿದ್ದರೆ ಒಬ್ಬರನ್ನೊಬ್ಬರು ದ್ವೇಷಮಾಡುವುದು ಯಾಕೆ?’’ ಇತ್ಯಾದಿ ಮಾತುಗಳಿಂದ ಮಾರ್ಮಿಕವಾಗಿ ಸಮಾಜವನ್ನು ಚುಚ್ಚುತ್ತಲೇ ಹಿಂದೂ-ಮುಸ್ಲಿಂ ಏಕತೆಗಾಗಿ ಶ್ರಮಿಸಿದವನು.

ಹಿಂದೂಗಳು ಅವನನ್ನು ಕಬೀರ ದಾಸನೆಂದು ಕರೆದರು, ವೇದಾಂತ ಕವಿ, ವೈಷ್ಣವ ಪಂಥೀಯ ಎಂದು ತಮ್ಮವನನ್ನಾಗಿಸಿಕೊಳ್ಳಲು ಪ್ರಯತ್ನಿಸಿದರು. ಮುಸ್ಲಿಮರು ಸೂಫಿ ಎಂದು ತಮ್ಮವನನ್ನಾಗಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಕಬೀರನು ಒಮ್ಮೆ ತಾನು ಅಲ್ಲಾನ ಮಗನೆಂದೂ ಮತ್ತೊಮ್ಮೆ ತಾನು ರಾಮನ ಮಗನೆಂದೂ ಹೇಳಿ ಇಬ್ಬರನ್ನೂ ಸಾಂಭಾಳಿಸಿದ್ದ.

ಮುಸ್ಲಿಂ ತಂದೆತಾಯಿಯರ ಸಾಕುಮಗನಾಗಿ ಬೆಳೆದ ಕಬೀರ ಹಿಂದೂ ಗುರುಗಳಿಂದ ಆಕರ್ಷಿತನಾದದ್ದು, ಹಿಂದೂ ಜೀವನ ಮಾರ್ಗವನ್ನು ಅನುಸರಿಸಲಾರಂಭಿಸಿದ್ದು ಸಹಜವಾಗಿಯೇ ಆಗಿನ ಮುಸ್ಲಿಂ ಸಮುದಾಯದಲ್ಲಿ ಕ್ಷೋಭೆಯನ್ನುಂಟುಮಾಡಿತು. ಮಾನವ ಕುಲ ಒಂದೇ ಎಂಬ ಕಬೀರನ ಸಂದೇಶ, ಹಿಂದೂ-ಮುಸ್ಲಿಂ ಏಕತೆಯ ಪ್ರಯತ್ನಗಳು ಧಾರ್ಮಿಕ ಸನಾತನವಾದಿಗಳನ್ನೂ ವ್ಯವಸ್ಥೆಯನ್ನೂ ಕಂಗೆಡಿಸಿದವು. ರಾಜಶಾಹಿ ಸರಕಾರ ಅವನನ್ನು ವಾರಣಾಸಿಯಿಂದ ಗಡಿಪಾರು ಮಾಡಿತು. ಕಬೀರ ಅಲೆಮಾರಿಯಾಗಿ ಉತ್ತರ ಭಾರತದ ಉದ್ದಗಲ ಸುತ್ತಾಡಿ ಮಾನವ ಕುಲ ಒಂದೇ ಎಂಬ ಸಂದೇಶ ಸಾರಿದ. ಕಬೀರ ಎದುರಿಸಿದ ಈ ಬಿಕ್ಕಟ್ಟನ್ನೂ ಸಾಮಾಜಿಕ ಸಂಘರ್ಷವನ್ನೂ ಬಿಂಬಿಸುವ ನಾಟಕವೊಂದನ್ನು ಭೀಷ್ಮ ಸಹಾನಿಯವರು ಬರೆದಿದ್ದಾರೆ. ಕಬೀರನ ವ್ಯಕ್ತಿತ್ವವನ್ನೂ ಅವನ ಮಾನವ ಪ್ರೀತಿ ತತ್ವಚಿಂತನೆಯನ್ನೂ ಏಕತ್ರ ನಿರೂಪಿಸುವ ಈ ನಾಟಕವನ್ನು ಟಿ. ಎಸ್. ಲೋಹಿತಾಶ್ವ ಕನ್ನಡಕ್ಕೆ ಅನುವಾದಿಸಿದ್ದಾರೆ. ‘‘ನನ್ನ ಧರ್ಮ ಮಾನವ ಧರ್ಮ. ನನ್ನ ದೃಷ್ಟಿಯಲ್ಲಿ ಯಾರೂ ಹಿಂದೂಗಳಲ್ಲ ಯಾರೂ ಮುಸಲ್ಮಾನರಲ್ಲ, ಎಲ್ಲರೂ ಮಾನವರು, ಎಲ್ಲರೂ ಅವನ ಸೇವಕರು’’ ಎಂದು ಎದೆ ಸೆಟೆಸಿ ಹೇಳುವ ಕಬೀರನ ಮಾತುಗಳು ತ್ರಿಕಾಲಕ್ಕೂ ಸಲ್ಲುವಂಥ ಮಾತುಗಳು.ಇಂಥ ಕಬೀರನನ್ನು ಮತಗಳಿಕೆಯ ಲಾಭಕ್ಕಾಗಿ ಸ್ವಯಂಘೋಷಿತ ಹಿಂದೂ ಧರ್ಮೋದ್ಧಾರದ ಪಕ್ಷವೊಂದು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನದು.

ಶಂಕುಸ್ಥಾಪನೆ ನೆರವೇರಿಸುತ್ತ ಮೋದಿಯವರು ಮಾಡಿದ ಭಾಷಣ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸಗಢಗಳಲ್ಲಿನ ಕಬೀರ ಪಂಥಾನುಯಾಯಿ ದಲಿತರ ಮತಗಳಮೇಲೆ ಕಣಿಟ್ಟ ಧಾಟಿಯದು. ಕವಿಯಾಗಿ ಕಬೀರ್ ಅವನ ಕಾಲಕ್ಕೆ ಭಾರತದಲ್ಲಿದ್ದ ಎಲ್ಲ ಜಾತಿಮತಗಳನ್ನೂ ಮೀರಿದವನು. ಮಾನವ ಪ್ರಜ್ಞೆ ಕೇಂದ್ರಿತವಾದ ವ್ಯಕ್ತಿತ್ವ ಮತ್ತು ಕಾವ್ಯದಿಂದ ಕಬೀರ ಎಲ್ಲ ಜಾತಿಮತಪಂಥಗಳನ್ನೂ ಒಳಹೊಕ್ಕು ನೋಡಿ ಎಲ್ಲರನ್ನೂ ತನ್ನೆದೆಗೆ ಸೆಳೆದುಕೊಂಡವನು. ಧರ್ಮ, ಜಾತಿಮತ ಭೇದಗಳಿಂದ ಮುಕ್ತವಾದ ತನ್ನ ಅಖಂಡ ಮಾನವ ಪ್ರೀತಿಯಿಂದಾಗಿ ದಲಿತ-ಬ್ರಾಹ್ಮಣರಾದಿಯಾಗಿ ಎಲ್ಲರಿಗೂ ಸಲ್ಲುವ ಕಬೀರನನ್ನು, ಕಬೀರ ಪಂಥವನ್ನು ಹಿಂದೂ ಧರ್ಮದ ಭಾಗವಾಗಿ ಜನ ಸ್ವೀಕರಿಸಿದ್ದಾರೆ. ಸಿಕ್ಖ್ಖರು ಅವನನ್ನು ಭಾಗವತರಲ್ಲಿ ಒಬ್ಬನೆಂದು ಒಪ್ಪಿಕೊಂಡಿದ್ದಾರೆ. ಗುರುಗ್ರಂಥಸಾಹೀಭಾದಲ್ಲಿ ಅವನ ಕವಿತೆಗಳನ್ನು ಸೇರಿಸಲಾಗಿದೆ. ಕಬೀರನ ಚಿಂತನೆಗಳು ಭಾರತೀಯ ಇಸ್ಲಾಮಿಕ್ ಆಚರಣೆಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿವೆಯೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕವ್ವಾಲಿ ಗಾಯನ, ಇಸ್ಲಾಂ ವಾಸ್ತುಶಿಲ್ಪ ಕಬೀರನಿಂದ ಪ್ರಭಾವಿತವಾಗಿವೆ. ಮಘರ್‌ನಲ್ಲಿರುವ ಅವನ ‘ರೌಜ’ ದೇಶದ ವಾಸ್ತುಪರಂಪರೆಯ ಒಂದು ಅಂಗವಾಗಿ ಉಳಿದಿದೆ. ಕಬೀರನ ಚಿಂತನೆಗಳು ಕ್ರಿಶ್ಚಿಯನ್ ಧರ್ಮದ ಚಿಂತನೆಗಳಿಗೆ ಹೋಲುವಂತಿದ್ದು ಅವನು ಕ್ರಿಶ್ಚಿಯನ್ ಧರ್ಮದಿಂದ ಪ್ರಭಾವಿತನಾಗಿ ಕವಿತೆಗಳನ್ನು ರಚಿಸಿರಬಹುದೆಂದು ಹತ್ತೊಂಬತ್ತನೆಯ ಶತಮಾನದ ಕ್ರಿಶ್ಚಿಯನ್ ಧರ್ಮ ಪ್ರಚಾರಕರು ಅಭಿಪ್ರಾಯಪಟ್ಟಿದ್ದಾರೆ. ಕಬೀರ ಬೌದ್ಧ ಧರ್ಮದ ಚಿಂತನೆಗಳಿಗೂ ಋಣಿಯಾಗಿದ್ದ ಎಂಬುದನ್ನು ಕುರಿತು ವಿದ್ವತ್ವಲಯಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಜೈನ ಕವಿಗಳು ಕಬೀರನ ಕಾವ್ಯಶೈಲಿಯಿಂದ ಪ್ರಭಾವಿತರಾಗಿದ್ದು ಹದಿನೇಳನೆ ಶತಮಾನದ ಜೈನ ಕವಿ ಆನಂದಘನ್ ಎಂಬವನನ್ನು ‘ಜೈನಕಬೀರ’ನೆಂದೇ ಕರೆಯಲಾಗುತ್ತಿತ್ತಂತೆ.

ಕಬೀರ ಕಾಲದೇಶಗಳನ್ನು ಮೀರಿದ ಸಂತ ಕವಿ. ಪ್ರಾಕ್ತನ ಗ್ರಂಥ ಭಂಡಾರಗಳಲ್ಲಿ ಅವನ ಕಾವ್ಯಕೃತಿಗಳು ಹಸ್ತಪ್ರತಿಗಳಲ್ಲಿ ಇಂದಿಗೂ ಲಭ್ಯ. ಕಬೀರನ ದ್ವಿಪದಿಗಳು ಮತ್ತು ಹಾಡುಗಳು ಹೊಸ ಕಾವ್ಯದ ಹರಿಕಾರನಂತೆ ಯುವ ತಲೆಮಾರಿನ ಲೇಖಕರನ್ನು, ಸಾಹಿತ್ಯಾಸಕ್ತರನ್ನು ಆಕರ್ಷಿಸಿದೆ, ಪ್ರಭಾವಿಸಿದೆ. ಇಂದಿಗೂ ಆಕರ್ಷಿಸುತ್ತಿದೆ. ಕಬೀರ, ರಸಿಕರು ಮತ್ತು ವಿದ್ವಾಂಸರಿಬ್ಬರ ಗಮನವನ್ನೂ ಸೆಳೆದಿರುವ ಕವಿಯಾಗಿರುವುದು ಅವನ ಕಾವ್ಯದ ವೈಶಿಷ್ಟ್ಯವಾಗಿದೆ. ಇಂದು ನಾಲ್ಕು ಉಪಖಂಡಗಳಲ್ಲಿ ಕಬೀರನ ಕಾವ್ಯ ಕುರಿತು ವಿಶೇಷ ಅಧ್ಯಯನ ನಡೆದಿದೆ. ಕಬೀರನ ಆರನೂರನೇ ಜನ್ಮೋತ್ಸವದ ಅಂಗವಾಗಿ, 1998ರಲ್ಲಿ ನಡೆದ ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನ, ‘ಇಮೇಜಸ್ ಆಫ್ ಕಬೀರ್’ ಗ್ರಂಥ. ಕಬೀರನ ಕಾವ್ಯದ ಅರ್ಥವಂತಿಕೆ ಮತ್ತು ಸೈದ್ಧಾಂತಿಕ ಶ್ರೀಮಂತಿಕೆಯನ್ನು ಚರ್ಚಿಸುವ ವಿವಿಧ ಬಗೆಯ ಗ್ರಹಿಕೆಗಳ ಹಲವಾರು ಪ್ರಬಂಧಗಳ ಸಂಕಲನವಿದು. ಕಬೀರನ ಕಾವ್ಯದ ಪುನರ್‌ಮುದ್ರಣ, ಅವನ ಆಖ್ಯಾಯಿಕೆಗಳು ಮತ್ತು ಐತಿಹ್ಯಗಳನ್ನು ಸಂಗ್ರಹಿಸಿ ಪ್ರಕಟಿಸುವ, ಅಧ್ಯಯನ ಮಾಡುವ ಕೆಲಸವೂ ವಿದೇಶಗಳಲ್ಲಿ ಚುರುಕಿನಿಂದ ಸಾಗಿದೆ. ಚೆಕೋಸ್ಲವಾಕಿಯಾದ ಜರೊಸ್ಲಾವ್ ಸ್ಟರಾಂಡ್ ಎಂಬ ವಿದ್ವಾಂಸರೊಬ್ಬರು ಕಬೀರನ ಪದ್ಯಗಳ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆಂದು ವರದಿಯಾಗಿದೆ.

ಚಲಚಿತ್ರ ನಿರ್ದೇಶಕಿ ಶಬನಮ್ ವೀರ್ಮಾನಿ ಭಾರತ ಮತ್ತು ಪಾಕಿಸ್ತಾನಗಳಲ್ಲಿನ ಕಬೀರ್ ಗಾಯಕರನ್ನು ಗುರುತಿಸುವ ಸಾಕ್ಷ್ಯ ಚಿತ್ರಮಾಲಿಕೆ ನಿರ್ಮಿಸಿದ್ದಾರೆ. ಪುರುಷೋತ್ತಮ ಅಗರ್ವಾಲ್ ಆಧುನಿಕ ಭಾರತೀಯ ಕಾವ್ಯದ ಹಿನ್ನೆಲೆಯಲ್ಲಿ ಕಬೀರನ ಕಾವ್ಯವನ್ನು ವಿಮರ್ಶಿಸಿ ಗ್ರಂಥವೊಂದನ್ನು ರಚಿಸಿದ್ದಾರೆ. ಜಾಕಲ್ ಹಾಲೆ ಎಂಬ ವಿದ್ವಾಂಸರು ವೈಷ್ಣವ ತತ್ವಸಿದ್ಧಾಂತದ ಹಿನ್ನೆಲೆಯಲ್ಲಿ ಕಬೀರನ ಕಾವ್ಯದ ಅಧ್ಯಯನ ನಡೆಸಿದ್ದರೆ, ಥಾಮಸ್ ಬ್ರುಯಿನ್ ಎಂಬವರು ಕಬೀರನ ಕಾವ್ಯದಲ್ಲಿ ಕಂಡುಬರುವ ಶಬ್ದಾರ್ಥ ಮತ್ತು ಭಾಷೆಯ ಉಚ್ಚಾರಣೆಯಲ್ಲಿನ ಪಲ್ಲಟ ಕುರಿತು ಅಧ್ಯಯನ ನಡೆಸಿದ್ದಾರೆ. ಕಬೀರನ ಕಾವ್ಯದ ವ್ಯಾಪಕ ಅಧ್ಯಯನ, ವಿಮರ್ಶೆಗಳ ಜೊತೆಗೆ ವಿವಿಧ ಭಾಷೆಗಳಿಗೆ ಕಬೀರನ ಕಾವ್ಯ ಅನುವಾದಗೊಳ್ಳುತ್ತಿರುವುದು ಜಾಗತಿಕ ವಲಯದಲ್ಲಿ ಕಬೀರನ ಕಾವ್ಯ ಮೂಡಿಸಿರುವ ಆಸಕ್ತಿಯ ಕುರುಹಾಗಿದೆ. ಇಂಗ್ಲಿಷ್ ಅಲ್ಲದೆ ಚೀನಾ ಮತ್ತು ಹಂಗರಿಯನ್ ಭಾಷೆಗಳಿಗೆ ಕಬೀರನ ಕಾವ್ಯ ಅನುವಾದಗೊಳ್ಳುತ್ತಿದೆ. ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ವಿಶ್ವ ಕವಿ ರವೀಂದ್ರನಾಥ ಠಾಕೂರರು ಕಬೀರನ ಕಾವ್ಯವನ್ನು ಇಂಗ್ಲಿಷ್ ಭಾಷೆಗೆ ‘ಸಾಂಗ್ಸ್ ಆಫ್ ಕಬೀರ್’ ಎಂದು ಅನುವಾದಿಸಿರುವುದುಂಟು.

 ಐದುನೂರನೇ ಪುಣ್ಯತಿಥಿ ಅಂಗವಾಗಿ ಕಬೀರನ ಸ್ಮರಣಾರ್ಥ ಕಾವ್ಯವಾಚನ, ವಿಚಾರ ಸಂಕಿರಣಗಳನ್ನು ನಡೆಸುವ ಹಲವಾರು ಕಾರ್ಯಕ್ರಮಗಳನ್ನು ವಿದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ವರದಿಯಾಗಿದೆ. ಮ್ಯಾಡಿಸನ್‌ನಲ್ಲಿ ನಡೆಯಲಿರುವ ದಕ್ಷಿಣ ಏಶ್ಯಾ ಸಮ್ಮೇಳನದಲ್ಲಿ ಕಬೀರನ ಬಗ್ಗೆ ಆಹ್ವಾನಿತ ವಿಮರ್ಶಕರಿಂದ ಚರ್ಚೆ/ಸಂವಾದ ನಡೆಯಲಿದೆ. ಮುಂದಿನ ವರ್ಷ ಅಮೆರಿಕ ಮತ್ತು ಚೀನಾಗಳಲ್ಲಿ ಕಬೀರ್ ಉತ್ಸವ ನಡೆಯಲಿದೆ. ಆಕ್ಸ್‌ಫರ್ಡ್ ಕಬೀರನ ಕೃತಿಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ಸಿದ್ಧತೆ ನಡೆಸಿದೆ. ಕಬೀರ ಜನ್ಮ ದಿನಾಂಕದಷ್ಟು ಖಾತರಿಯಾದ ಮಾಹಿತಿ ಅವನ ಮರಣ ದಿನಾಂಕದ ಬಗ್ಗೆ ಲಭ್ಯವಿಲ್ಲ ಎನ್ನುತ್ತಾರೆ ಚರಿತ್ರೆಕಾರರು.

ಕಬೀರನ ಬಗ್ಗೆ ಸಂಶೋಧನೆ ನಡೆಸುತ್ತಿರುವ ಪ್ರೊ. ಡೇವಿಡ್ ಎನ್.ಲೊರೆಂಜೊ ಅವರ ಪ್ರಕಾರ, ಕಬೀರ 1518ರ ವರೆಗೆ ಜೀವಿಸಿದ್ದ ಎಂಬುದಕ್ಕೆ, ಕಬೀರನೊಂದಿಗೆ ಸಂಬಂಧ ಹೊಂದಿದ್ದ ಅವನ ಸಮಕಾಲೀನರ ಆಖ್ಯಾಯಿಕೆಗಳಲ್ಲಿ ಕಬೀರನ ಬಗ್ಗೆ ಮಾಹಿತಿ ಇದೆಯಂತೆ. ಬಹುತೇಕ ವಿದ್ವಾಂಸರು ಮತ್ತು ಚರಿತ್ರೆಕಾರರು ಅಭಿಪ್ರಾಯಪಟ್ಟಿರುವಂತೆ ಕಬೀರ 1518ರ ವರೆಗೆ ಜೀವಿಸಿದ್ದ ಎನ್ನುವುದನ್ನು ಅಲ್ಲಗಳೆಯುವ ಹೊಸ ಸಂಶೋಧನೆ ಯಾವುದೂ ಬೆಳಕಿಗೆ ಬಂದಿಲ್ಲ. ಇಲ್ಲಿಯ ತನಕ ಒಪ್ಪಿತವಾಗಿರುವಂತೆ ಕಬೀರ 1518ರಲ್ಲಿ ಇಹಲೋಕ ತ್ಯಜಿಸಿದ. ಎಂದೇ ಇದು ಕಬೀರನ 500ನೇ ಪುಣ್ಯ ತಿಥಿಯ ವರ್ಷ. ಕಬೀರನ ಬಗ್ಗೆ ವಿದೇಶಗಳಲ್ಲಿ ಕಂಡು ಬರುತ್ತಿರುವ ಆಸಕ್ತಿಯಲ್ಲಿ ಸಾಸಿವೆ ಕಾಳಿನಷ್ಟಾದರೂ ನಮ್ಮಲ್ಲಿ ಕಾಣಿಸದಿರುವುದಕ್ಕೆ ವಿಷಾದಪಡಬೇಕೋ ಅಥವಾ....ಪ್ರಧಾನ ಮಂತ್ರಿ ಮೋದಿಯವರು ಸಂತ ಕವಿ ಕಬೀರನ ಅಕಾಡಮಿಯ ಶಂಕುಸ್ಥಾಪನೆ ನೆರವೇರಿಸಿರುವುದು ಹೊರತು ಬೇರಾವ ಕಾರ್ಯಕ್ರಮವೂ ನಡೆದಂತಿಲ್ಲ. ಕಬೀರನ ಸ್ಮರಣೆಯಲ್ಲಿನ ಈ ನಿರುತ್ಸಾಹ-ನಿರಾಸಕ್ತಿಗಳು ಮಾನವ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿಸ್ಮರಣೆಯ ಕುರುಹಾಗಿರಬಹುದೆ? ಅಥವಾ ಅವಜ್ಞೆಯೇ 

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News