ಗುಪ್ತ ಒಲವು ಮತ್ತು ನಿಲುವುಗಳು

Update: 2018-07-08 07:19 GMT

ಶಿಕ್ಷಣ ಹೂರಣ: ಭಾಗ - 1

ಕಲಿಕೆಯ ವಿಷಯಗಳನ್ನು, ಪಠ್ಯದ ವಿಷಯಗಳನ್ನು ಯಾವುದೋ ಅನ್ಯಗ್ರಹದ ವಿಷಯಗಳಂತೆ ನೋಡುವುದಕ್ಕಾಗಲಿ, ಅವುಗಳನ್ನು ನಿತ್ಯ ಬದುಕಿನ ಜೊತೆಗೆ ಸಮೀಕರಿಸದೇ ಪ್ರತ್ಯೇಕಿಸುವುದಕ್ಕಾಗಲಿ ಸಾಧ್ಯವೇ ಇಲ್ಲ ಹಾಗೂ ಅದು ಶಿಕ್ಷಣದ ಗುರಿಯೂ ಅಲ್ಲ. ಹಾಗೆಯೇ, ಮಕ್ಕಳು ತಾವು ಕಲಿಯುತ್ತಿರುವ ವಿಷಯಗಳನ್ನು ತಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳೊಂದಿಗೆ ತುಲನೆ ಮಾಡಿ ನೋಡುವುದನ್ನು ಕಲಿಯುವುದರೊಂದಿಗೆ ಜಾಗೃತಿ ಮತ್ತು ಅರಿವು ಒಟ್ಟೊಟ್ಟಿಗೇ ದೊರಕಿದರೇನೇ ಅವರು ಸಾಮಾಜಿಕವಾಗಿ ಸಮರ್ಥರಾಗುವಂತಹ ವ್ಯಕ್ತಿಗಳಾಗಿ ರೂಪುಗೊಳ್ಳುವುದು.

ಶಿಕ್ಷಣ ಸಂಸ್ಥೆಗಳನ್ನು ತೆರೆಯುವಲ್ಲಿ ಹಲವಾರು ಉದ್ದೇಶಗಳಿರುತ್ತವೆ. ಸರಕಾರ ನಡೆಸುವ ಶಿಕ್ಷಣ ಸಂಸ್ಥೆಯು ಎಲ್ಲರಿಗೂ ಕಲಿಕೆಯ ಹಕ್ಕು ಇರುವುದೆಂದೂ, ಎಲ್ಲರೂ ಶಿಕ್ಷಣ ಪಡೆದು ಮುಂದಿನ ಬದುಕು ಭವಿಷ್ಯಗಳನ್ನು ರೂಪಿಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಲಿಖಿತ ಸಂವಿಧಾನವನ್ನೇ ಅವಲಂಬಿಸಿರುತ್ತದೆ. ಪ್ರಜೆಗಳ ಮೂಲಭೂತ ಹಕ್ಕನ್ನು ಕಾಯ್ದಿರಿಸುವ ಇವನ್ನು ಸರಕಾರಿ ಶಾಲೆಗಳೆಂದೇ ಕರೆಯಬೇಕು. ಆದರೆ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಹೊಂದುವ ಆಲೋಚನೆಗಳೋ ಹಲವು ಬಗೆ. ಸೈದ್ಧಾಂತಿಕವಾಗಿ ತನ್ನ ಒಲವು ನಿಲುವನ್ನು ಹೊಂದಿರುವಂತಹ ಶಿಕ್ಷಣ ಸಂಸ್ಥೆಗಳು ತಮ್ಮ ಸಿದ್ಧಾಂತದ ಪ್ರತಿಪಾದನೆಯನ್ನು ಮಕ್ಕಳ ಮೂಲಕ ಮುಂದಿನ ಪೀಳಿಗೆಗೆ ಒಯ್ಯುವ ಉದ್ದೇಶವು ಗುಪ್ತಗಾಮಿನಿಯಾಗಿರುತ್ತದೆ.

ಗುಪ್ತ ಸಿದ್ಧಾಂತದ ಶಾಲೆಗಳು ಎನ್ನಬಹುದು. ಇನ್ನು ಕೆಲವು ಸಂಸ್ಥೆಗಳು ಶಿಕ್ಷಣ ಮತ್ತು ಉತ್ತಮ ಜೀವನ ಮಟ್ಟದಿಂದ ವಂಚಿತರಾಗಿರುವ ಸಮುದಾಯಗಳು ಶಿಕ್ಷಣವನ್ನು ಪಡೆದು, ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಅಥವಾ ಒಂದು ಮಟ್ಟ ಹೆಚ್ಚಿಗೇ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲಿ ಎಂಬ ಉದ್ದೇಶವನ್ನು ಹೊಂದಿದ್ದು ಸೌಲಭ್ಯ ವಂಚಿತ ಮತ್ತು ನಿರ್ಲಕ್ಷ್ಯ ಸಮುದಾಯಗಳಿಗಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದಿರುತ್ತಾರೆ. ಇವನ್ನು ಸಮುದಾಯ ಕಲ್ಯಾಣ ಶಾಲೆಗಳು ಎನ್ನೋಣ. ಇನ್ನು ಬಹಳಷ್ಟು ಖಾಸಗಿ ವ್ಯಕ್ತಿಗಳು ಮಕ್ಕಳು ಮುಂದೆ ಏನು ಮಾಡುತ್ತಾರೆ, ಯಾವ ಬದುಕು ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆ ಎಂಬ ಕಾಳಜಿಗಿಂತಲೂ ತಮಗೆ ಆಗ ಅಲ್ಲಿ ಸಂಸ್ಥೆಯು ಲಾಭದಾಯಕವಾಗಿದೆಯೇ ಇಲ್ಲವೇ ಎಂಬುದಷ್ಟನ್ನೇ ನೋಡುತ್ತಿರುತ್ತಾರೆ. ಅವರಿಗೆ ಶಿಕ್ಷಣವು ಸಂಪೂರ್ಣವಾಗಿ ಒಂದು ವಾಣಿಜ್ಯವಷ್ಟೇ. ಇವುಗಳನ್ನು ವಾಣಿಜ್ಯೋದ್ದೇಶದ ಶಾಲೆಗಳೆಂದೇ ಹೇಳಬೇಕು. ಇನ್ನು ಕೆಲವರು ಸಮಾಜದಲ್ಲಿ ಸಾಂಪ್ರದಾಯಕವಾಗಿ ಜಡ್ಡುಗಟ್ಟಿರುವ ವ್ಯವಸ್ಥೆಯಿಂದ ಮುಕ್ತವಾಗಿ ಸಂಪೂರ್ಣ ಸ್ವತಂತ್ರ ಮತ್ತು ಸಹಜ ಪ್ರಜ್ಞಾವಂತ ವ್ಯಕ್ತಿಗಳಾಗಲಿ ಎಂಬ ಉದ್ದೇಶದಿಂದ ಶಾಲೆಯನ್ನು ಪ್ರಾರಂಭಿಸುತ್ತಾರೆ. ಇವುಗಳನ್ನು ಪರ್ಯಾಯ ಶಾಲೆಗಳೆಂದು ಗುರುತಿಸೋಣ.

ಜನ ಮತ್ತು ಧನ ಸಂಪನ್ಮೂಲ ಚೆನ್ನಾಗಿ ಇರುವ ಕೆಲವರು ಏನಾದರೂ ಮಾಡಬೇಕೆಂದು ತುಡಿಯುತ್ತಿರುತ್ತಾರೆ. ಅವರಿಗೆ ಶಿಕ್ಷಣ ಸಂಸ್ಥೆಯನ್ನೇ ಮಾಡಬೇಕೆಂದೇನೂ ಇರುವುದಿಲ್ಲ. ತತ್ಕಾಲದ ಪ್ರಭಾವಕ್ಕೋ, ಅಥವಾ ತಮ್ಮ ಸಂಪನ್ಮೂಲಗಳನ್ನು ಜನಪ್ರಿಯತೆಯ ಮೂಲವನ್ನಾಗಿ ಬಳಸಿಕೊಳ್ಳಬಹುದೆಂದೋ ಒಟ್ಟಾರೆ ಶಾಲೆಯಂತೂ ಪ್ರಾರಂಭಿಸಿರುತ್ತಾರೆ. ಇಂತಹವನ್ನು ಜನಪ್ರಿಯ ಶಾಲೆಗಳು ಎಂದು ಕರೆಯೋಣ. ಇನ್ನು ಸಾಂಸ್ಥಿಕ ಮತ್ತು ಸಾಂಪ್ರದಾಯಕ ವ್ಯವಸ್ಥೆಗಳ ಶಿಕ್ಷಣ ವಿಧಾನಗಳನ್ನು ಒಪ್ಪದ ಮತ್ತು ಅವುಗಳಲ್ಲಿ ತಮಗಿರುವ ನ್ಯೂನತೆಗಳನ್ನು ಸರಿಪಡಿಸಲಾಗದೇ ಅಥವಾ ಅದರಲ್ಲಿರುವ ಅನೇಕ ವಿಷಯಗಳಿಗೆ ಬೇಸತ್ತಿರುವ ಪೋಷಕರಿದ್ದಾರೆ. ಅವರು ಇವೆಲ್ಲದರಿಂದ ಬಿಡುಗಡೆ ಹೊಂದಿ ತಮ್ಮ ಮಕ್ಕಳಿಗೆ ಮುಕ್ತವಾದ ಶಿಕ್ಷಣವನ್ನು ಕೊಡಿಸುವಂತಹ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇಂತಹವರ ಮಕ್ಕಳು ಸಾಂಸ್ಥಿಕ ರೂಪದ ಶಿಕ್ಷಣ ಸಂಸ್ಥೆಗಳಿಂದ ಬಿಡುಗಡೆ ಹೊಂದಿದ್ದರೂ ಅವರು ಶಿಕ್ಷಣ ವ್ಯವಸ್ಥೆಯ ಒಂದು ರೂಪುರೇಷೆಯಲ್ಲಿರುವಂತಹ ಪಠ್ಯಗಳನ್ನು ಅವಲಂಬಿಸಬೇಕಾಗುತ್ತದೆ. ಅದನ್ನೇ ಅನುಸರಿಸಿದರೂ ಸಾಂಸ್ಥಿಕ ವ್ಯವಸ್ಥೆಯಿಂದ ಮುಕ್ತರಾಗಿರುತ್ತಾರೆ. ಇದರ ಅನುಸಾರವಾಗಿ ಕಲಿಯುವವರು ಶಾಲಾಮುಕ್ತ ಮಕ್ಕಳು ಎನ್ನುವುದಕ್ಕಿಂತ, ತಾವಿರುವಲ್ಲಿಯೇ ಶಾಲೆಯನ್ನು ಸೃಷ್ಟಿಸಿಕೊಳ್ಳುವವರಾದ್ದರಿಂದ ಮುಕ್ತಶಾಲೆ ಎನ್ನುವುದೇ ಸರಿ ಎಂದೆನಿಸುತ್ತದೆ. ಈಗ ವಿಷಯಕ್ಕೆ ಬಂದರೆ, ಏನೂ ಅರಿಯದ ಮಕ್ಕಳನ್ನು ಮೆದು ಜೇಡಿ ಮಣ್ಣೆಂದು ಭಾವಿಸೋಣ. ಇನ್ನು ಪೋಷಕರ ಒಲವು ನಿಲುವುಗಳ ಮತ್ತು ಸ್ಥಿತಿಗತಿಗಳ ಪ್ರಕಾರವಾಗಿ ತಮಗೆ ಅನುಕೂಲ ಎನಿಸುವಂತಹ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ಆದರೆ ಪ್ರಯೋಗವಂತೂ ಮಕ್ಕಳ ಮೇಲೆಯೇ. ಮಕ್ಕಳೇ ಇಡೀ ಶಿಕ್ಷಣ ವ್ಯವಸ್ಥೆಯ ಬಲಿಪಶುಗಳು. ಯಾವುದೇ ಶಿಕ್ಷಣ ಪದ್ಧತಿಯ ಸಫಲತೆ ಅಥವಾ ವಿಫಲತೆಗಳು ಮಕ್ಕಳ ಬದುಕು ಭವಿಷ್ಯದ ಮೇಲೆಯೇ ಪರಿಣಾಮವನ್ನು ಬೀರುವುವು.

ಆಡಳಿತಾಂಗಗಳ ದೃಷ್ಟಿ ಮತ್ತು ಸ್ಪಷ್ಟತೆ ಹಾಗೂ ಶಿಕ್ಷಕರ ನಿಚ್ಚಳ ದೃಷ್ಟಿ, ಬದ್ಧತೆ ಮತ್ತು ಪ್ರಾಮಾಣಿಕತೆ ಎಂತಹುದೇ ಶಾಲೆಯಲ್ಲಿದ್ದರೂ ಮಕ್ಕಳ ಬದುಕು ಭವಿಷ್ಯಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಸಾಧ್ಯ. ಪ್ರಸ್ತುತ ಸಾಮಾಜಿಕ ಸನ್ನಿವೇಶದಲ್ಲಿ ಶಿಕ್ಷಣ ಪದ್ಧತಿ ಮತ್ತು ಶಿಕ್ಷಕರ ಒಲವು ನಿಲುವುಗಳು ಬಹಳ ಗಂಭೀರವಾದ ದಿಕ್ಕಿನಲ್ಲಿ ಕೆಲಸ ಮಾಡಬೇಕಾಗಿದೆ. ಅವುಗಳನ್ನು ಸ್ಥೂಲವಾಗಿ ಗಮನಿಸಿದ್ದೇ ಆದರೆ, ಮೊದಲನೆಯದಾಗಿ ಮಗುವು ತನ್ನ, ತನ್ನ ಕೌಟುಂಬಿಕ ಸ್ಥಿತಿಗತಿಗಳನ್ನು, ಸಾಮಾಜಿಕ ಪರಿಸ್ಥಿತಿಯನ್ನು ಸ್ಥೂಲವಾಗಿಯೂ ಮತ್ತು ಸೂಕ್ಷ್ಮವಾಗಿಯೂ ಅರಿಯಬೇಕಾಗಿರುವುದು. ಎರಡನೆಯದಾಗಿ ತನ್ನ ಬದುಕು ಭವಿಷ್ಯವನ್ನು ಮತ್ತು ಅದರ ಭದ್ರತೆಯನ್ನು ಇತರರೊಟ್ಟಿಗೆ ಹೇಗೆ ರೂಪಿಸಿಕೊಳ್ಳುವುದು. ಮೂರನೆಯದಾಗಿ, ತಾನು ಬಯಸುವ ಕಸುಬು, ಕೆಲಸ ಮಾಡುವ ಕ್ಷೇತ್ರ ಅಥವಾ ಆಸಕ್ತಿಯ ರಂಗದಲ್ಲಿ ನೈಪುಣ್ಯತೆಯನ್ನು ಸಾಧಿಸಲು ಮತ್ತು ಲಾಭದಾಯಕವಾಗಿರಲು ಕೌಶಲ್ಯಗಳನ್ನು ಸಂಪಾದಿಸುವುದು. ನಾಲ್ಕನೆಯದಾಗಿ ಉತ್ಪಾದನಾ ರಂಗ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸ್ಪರ್ಧೆ ಇರುವಾಗ ಆರೋಗ್ಯಕರವಾಗಿಯೂ ಮತ್ತು ಪರಸ್ಪರ ಸಹಕಾರ ತತ್ವದಲ್ಲಿ ತಾನೂ ಮತ್ತು ತನ್ನಂತೆಯೇ ಇರುವ ಇತರರನ್ನು ಪರಿಗಣಿಸುತ್ತಾ ಮುಂದುವರಿಯುವುದು. ಒಟ್ಟಾರೆ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದಕ್ಕೆ ತಾನೊಂದು ಕೇಂದ್ರವಾಗಿರುವುದು. ಇಷ್ಟನ್ನೇ ಸ್ಥೂಲವಾಗಿ ನೋಡಬೇಕಾಗಿರುವುದು ಎಂದರೆ ಹಾಸ್ಯವಾಗಿ ಕೇಳಿಸಬಹುದೇನೋ. ಏಕೆಂದರೆ ಇವೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳಾಗಿರುತ್ತವೆ. ಆದರೆ ಇವುಗಳೆನ್ನೆಲ್ಲ ವಿವಿಧ ಶಾಲೆಗಳಲ್ಲಿ ಹೇಗೆ ಗಮನಿಸಲಾಗುತ್ತದೆ ಅಥವಾ ಉಪಚರಿಸಲಾಗುತ್ತದೆ, ಇನ್ನೂ ಕೆಲವು ಸಲ ಹೇಗೆ ನಿರ್ಲಕ್ಷಿಸಲಾಗುತ್ತದೆ ಎಂಬುದನ್ನು ನೋಡೋಣ. 

ಸರಕಾರಿ ಶಾಲೆಗಳು: ಇವುಗಳ ಬಗ್ಗೆ ಮಾತನಾಡುವುದೇ ಕಷ್ಟವಾಗುತ್ತದೆ. ಇಲಾಖೆಯಿಂದ ಹಿಡಿದು, ಕಟ್ಟಕಡೆಯ ಉಪಾಧ್ಯಾಯರವರೆಗೂ ಆಯಾ ವ್ಯಕ್ತಿಯ ವೈಯಕ್ತಿಕ ಒಲವು ನಿಲುವುಗಳ ಮೇಲೆಯೇ ಶಿಕ್ಷಣದ ಗುಣಮಟ್ಟವೂ ಮತ್ತು ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದರ ಬದ್ಧತೆಯೂ ಪ್ರದರ್ಶಿತವಾಗುತ್ತದೆ. ಏಕೆಂದರೆ ಕಾನೂನು ಮತ್ತು ಶಾಸನಗಳ ಮೂಲಕ ಏನನ್ನೇ ರೂಢಿಗೆ ತರುವುದು ನಿಜವಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಏನೂ ಕೆಲಸಕ್ಕೆ ಬಾರದು. ಉತ್ತಮೋತ್ತಮ ಯೋಜನೆ ಮತ್ತು ಅಂಶಗಳು ಕಾಗದದಲ್ಲಿ ಮಾತ್ರ ಇರುತ್ತದೆ. ಇನ್ನು ಉಳಿದಂತೆ ನಾಮಕಾವಸ್ಥೆಗೆ ಅಥವಾ ತೋರಿಕೆಗೆ ಮಾತ್ರ ಕಾಟಾಚಾರಕ್ಕೆ ಸೀಮಿತವಾಗುತ್ತದೆ. ಯಾವುದೇ ಸರಕಾರಿ ಶಾಲೆಗಳು ಉತ್ತಮಗುಣಮಟ್ಟವನ್ನು ಕಾಯ್ದುಕೊಂಡಿದೆಯೆಂದರೆ ಅಲ್ಲಿರುವ ಯಾರೋ ಒಬ್ಬರು ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹವೇ ಕಾರಣವಾಗಿರುತ್ತದೆ. ಮುಖ್ಯೋಪಾಧ್ಯಾಯರಾಗಿ ಅಥವಾ ಯಾವುದೇ ರೀತಿಯಲ್ಲಿ ಶಾಲೆಯ ಸಿಬ್ಬಂದಿಯಾಗಿ ಬಂದವರು ಶಾಲೆಯ ಬಗ್ಗೆ ಕಾಳಜಿ ತೆಗೆದುಕೊಂಡು ಬದ್ಧತೆ ಹೊಂದಿದರೆ ಮಕ್ಕಳು ಧನ್ಯರು.

ಗುಪ್ತ ಸಿದ್ಧಾಂತದ ಶಾಲೆಗಳು: ಕ್ಯಾಚ್ ದೆವ್ ಎಂಗ್ ಎನ್ನುವ ಮಾತಿನಂತೆ ತಮ್ಮ ಯಾವುದೋ ವಾದದ, ಸಿದ್ಧಾಂತವನ್ನು ಸಮಾಜದ ಮೇಲೆ ಹೇರಲು ಬಳಸಿಕೊಳ್ಳುವ ಉತ್ತಮ ಪರಿಣಾಮಕಾರಿಯಾದ ಕ್ಷೇತ್ರವೆಂದರೆ ಅದು ಶಿಕ್ಷಣಸಂಸ್ಥೆ. ಹಾಗಾಗಿಯೇ ಅನೇಕ ಸೈದ್ಧಾಂತಿಕ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳನ್ನು ತಮ್ಮ ಸುಪರ್ದಿನಲ್ಲಿಟ್ಟುಕೊಂಡಿರುತ್ತವೆ. ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಭಗವದ್ಗೀತೆ ತರಗತಿ ಕಡ್ಡಾಯವಾಗಿಸಿದ್ದಾರೆ. ಕರಾಟೆ, ಸಂಗೀತ, ನೃತ್ಯ ಮತ್ತು ನಾಟಕ ತರಗತಿಗಳಿಗೆ ಇಲ್ಲದ ಕಡ್ಡಾಯ ಇಲ್ಲಿ ಭಗವದ್ಗೀತೆ ತರಗತಿಗಿದೆ. ಕಾರಣ ಕೇಳಲು, ಭಗವದ್ಗೀತೆ ಕಲಿಯುವುದರಿಂದ ಸಂಸ್ಕೃತ ಅಭ್ಯಾಸ ಆಗುತ್ತದೆ. ಸಂಸ್ಕೃತ ಅಭ್ಯಾಸ ಆಗುವುದರಿಂದ ಉಚ್ಚಾರಣೆ ಶುದ್ಧವಾಗುತ್ತದೆ. ಕ್ಲಿಷ್ಟಕರ ಶಬ್ದಗಳನ್ನು ಸುಲಲಿತವಾಗಿ ಹೇಳಲು ಸಾಧ್ಯವಾಗು ತ್ತದೆ. ಭಗವದ್ಗೀತೆಯನ್ನು ಪ್ರತಿದಿನವೂ ಪಠಿಸುವುದರಿಂದ ಏಕಾಗ್ರತೆ ಸಾಧ್ಯವಾಗುತ್ತದೆ. ಇದರಿಂದ ಮಕ್ಕಳು ಉತ್ತಮ ಫಲಿತಾಂಶವನ್ನು ಪಡೆಯು ತ್ತಾರೆ ಎಂದು ಆಡಳಿತ ಮಂಡಳಿ ಪೋಷಕರಿಗೆ ಉತ್ತರಿಸುತ್ತದೆ. ಅಲ್ಲಿನ ಒಂದು ಮಗುವನ್ನು ಕೇಳಿದೆ ನಿನಗೆ ಭಗವದ್ಗೀತೆ ಕ್ಲಾಸ್‌ಗೆ ಹೋಗಲು ಇಷ್ಟ ಇದೆಯೋ ಇಲ್ಲವೋ? ಎಂದು. ಅದು ದೇವರದ್ದಲ್ಲವಾ ಹೋಗಲೇ ಬೇಕು ಎಂದು ಮಗು ಉತ್ತರಿಸಿತು. ಅದೇ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡುತ್ತಾರೆ. ಸರಸ್ವತಿ ಪೂಜೆಯ ಕಾರಣ ಮಕ್ಕಳಿಗೆಲ್ಲಾ ವಿದ್ಯಾಧಿದೇವತೆಯ ಆಶೀರ್ವಾದ ಬೇಕಂತೆ. ಕ್ರೈಸ್ತರು, ಬೌದ್ಧರು, ಮುಸ್ಲಿಮರು ಇರುವ ಈ ಶಾಲೆಯಲ್ಲಿ ಬರೀ ಸರಸ್ವತಿ ಪೂಜೆ ಏಕೆ ಮಾಡುತ್ತೀರಿ ಎಂದು ಕೇಳಲಾದ ಒಂದು ಪ್ರಶ್ನೆಗೆ ಇಲ್ಲಿ ಧರ್ಮವನ್ನು ಯಾಕ್ರೀ ತರುತ್ತೀರಿ? ನಾವು ಧರ್ಮಾಧಾರಿತವಾಗಿ ಶಾಲೆ ನಡೆಸುವಂತಿದ್ದರೆ ಇತರ ಧರ್ಮೀಯ ಮಕ್ಕಳನ್ನು ಸೇರಿಸಿಕೊಳ್ಳುತ್ತಲೇ ಇರಲಿಲ್ಲ. ಇದು ಭಾರತೀಯ ಸಂಸ್ಕೃತಿ. ಸರಸ್ವತಿ ಪೂಜೆ ಮಾಡುವುದು ಧಾರ್ಮಿಕತೆಯಲ್ಲ, ಸಾಂಸ್ಕೃತಿಕ.

ಅಲ್ಲಿಗೆ ಧಾರ್ಮಿಕತೆಯನ್ನೇ ಸಂಸ್ಕೃತಿ ಎಂದು ಮಕ್ಕಳಲ್ಲಿ ಬಿಂಬಿಸುವಲ್ಲಿ ಆ ಶಾಲೆ ಯಶಸ್ವಿಯಾಗಿದೆ. ಅಷ್ಟೇಕೆ ಅಂತಹ ಶಾಲೆಯಿಂದ ಬರೀ ಆರೇಳು ವರ್ಷದ ವಿದ್ಯಾಭ್ಯಾಸದ ನಂತರ ಹೊರಗೆ ಬಂದಿರುವ ಹುಡುಗ ವೌಢ್ಯದ, ಮೂಲಭೂತ ವಾದದ ಅಮಲಿನಲ್ಲಿ ಮುಳುಗೇಳುತ್ತಿರುವುದನ್ನು ಕಾಣುತ್ತಿದ್ದೇನೆ. ಇದು ಒಂದು ಸಣ್ಣ ಉದಾಹರಣೆ. ಇದೇ ರೀತಿಯಲ್ಲಿ ಹಲವಾರು ಸಿದ್ಧಾಂತಗಳು ಹೀಗೇ ಕೆಲಸ ಮಾಡುತ್ತಿರಬಹುದು. ಮಕ್ಕಳೋ ಪಾಪದವು. ಅವಕ್ಕೇನೂ ತಿಳಿಯದಂತಹ ಸಮಯದಲ್ಲಿ ಅವರಿಗೆ ನಂಬಿಕೆಗಳನ್ನು ಹುಟ್ಟಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು. ಯಾವ ಶಿಕ್ಷಣದ ಉದ್ದೇಶವು ನಂಬುವ ಬದಲು ಪರೀಕ್ಷಿಸು, ನಂಬಿಕೆಗಿಂತ ವೈಚಾರಿಕೆ ಮುಖ್ಯ ಎಂದು ಆಗಿರುವಾಗ, ಅಂತಹ ಸ್ಥಳದಲ್ಲಿ ಮತ್ತು ಸಮಯದಲ್ಲಿಯೇ ಈ ರೀತಿಯಾಗಿ ನಂಬಿಕೆಗಳನ್ನು ಹೇರತೊಡಗಿದರೆ ಆ ಮಕ್ಕಳು ಮುಂದೆ ಏನನ್ನು ಪ್ರಶ್ನಿಸಿಯಾರು? ಯಾವ ಪ್ರಯೋಗಗಳನ್ನು ಮಾಡಿಯಾರು?

ರೋಗ ರುಜಿನಗಳ ಕಾರಣವನ್ನು, ಅವುಗಳನ್ನು ಪರಿಹರಿಸಿಕೊಳ್ಳಬೇಕಾ ಗಿರುವ ಬಗೆಯನ್ನು, ಹಿಂದೆ ವೌಢ್ಯದ ಕಾರಣದಿಂದ ರೋಗಗಳು ಹೇಗೆ ಮಾರಣಾಂತಿಕವಾಗಿರುತ್ತಿದ್ದವು ಎಂಬುದನ್ನು ವಿವರಿಸಿ ಹೇಳುತ್ತಾ, ಈಗ ಹೇಗೆ ವೈಜ್ಞಾನಿಕ ಸಂಶೋಧನೆಗಳು, ಪ್ರಯೋಗಗಳು, ಹೊಸ ಹೊಸ ಆವಿಷ್ಕಾರಗಳು ಮಾನವನಿಗೆ ವೈಜ್ಞಾನಿಕವಾಗಿ ಉಪಯುಕ್ತವಾಗಿವೆ ಎಂದು ಪಾಠ ಮಾಡುವ ಶಿಕ್ಷಕ ತನ್ನ ವಿದ್ಯಾರ್ಥಿಯು ಯಾವುದೋ ಒಂದು ರೋಗ ಪರಿಹಾರ್ಥವಾಗಿ ಹೋಮ ಮಾಡಿಸುವ ವಿಷಯವನ್ನು ತಿಳಿಸಿದಾಗ, ಕರಿದಾರ ಯಂತ್ರ, ಮಂತ್ರ ಬರೆದ ತಾಯತವನ್ನು ಯಾವುದೋ ಬೇನೆಯ ಉಪಶಮನಕ್ಕಾಗಿ ಕಟ್ಟಿಕೊಂಡಿರುವಾಗ ಆ ಶಿಕ್ಷಕನು ಆ ವಿಷಯವನ್ನು ಉಪಚರಿಸಬೇಕಾಗಿರುವ ಬಗೆಯಾದರೂ ಹೇಗೆ?

ಹೀಗೆ ಒಂದು ಶಾಲೆಯಲ್ಲಿ ಶಿಕ್ಷಕನೋರ್ವನು ವೌಢ್ಯಾಚರಣೆಗಳ ಬಗ್ಗೆ ಮಾತನಾಡುವಾಗ ವೈಜ್ಞಾನಿಕ ಮತ್ತು ವೈಚಾರಿಕತೆ ಮುನ್ನಡೆದಿರುವ ವಿಷಯಗಳನ್ನು ಹೇಳಬೇಕಾಗಿ ಬಂತು ಮತ್ತು ಫ್ರೆಂಚ್ ಕ್ರಾಂತಿಯ ಬಗ್ಗೆ ಪಾಠ ಮಾಡುವಾಗ ಅಲ್ಲಿನ ಚರ್ಚುಗಳು ಪ್ರಭುತ್ವದ ಜೊತೆಯಾಗಿ ಜನರನ್ನು ಶೋಷಿಸುತ್ತಿರುವ ಬಗ್ಗೆ ತಿಳಿಸಿ ಹೇಳುವಾಗ ಅದನ್ನು ಮಕ್ಕಳಿಗೆ ಪರಿಚಯವಿರುವ ಭಾರತದ ಶ್ರೇಣೀಕೃತ ಸಮಾಜದ ಹೋಲಿಕೆಯೊಡನೆ ಅರ್ಥೈಸಲು ಯತ್ನಿಸಿದರು. ಅದಕ್ಕೆ ಪೋಷಕರೊಬ್ಬರು ಶಾಲೆಯ ಮುಖ್ಯೋಪಾಧ್ಯಾಯಿನಿಗೆ ಬಂದು ದೂರು ಸಲ್ಲಿದ್ದರು. ಆ ಶಿಕ್ಷಕರು ತಾವು ಏನೇ ವಿಚಾರವಾದಿಗಳಾಗಿರಲಿ, ಅದು ಶಾಲೆಯಿಂದ ಹೊರಗೆ ಇರಲಿ. ಮಕ್ಕಳು ವಿವಿಧ ಶ್ರದ್ಧಾ ನಂಬಿಕೆ ಮತ್ತು ವಿಶ್ವಾಸಗಳ ಮೂಲದಿಂದ ಬಂದಿರುವವರಾಗಿರುತ್ತಾರೆ. ಅವರು ಇವರ ಮಾತುಗಳನ್ನು ಕೇಳಿ ಅದನ್ನು ಬಿಟ್ಟುಬಿಟ್ಟರೆ ಅಥವಾ ಪ್ರಭಾವಕ್ಕೊಳಗಾಗಿಬಿಟ್ಟರೆ ಏನು ಗತಿ ಎಂದು ಕೇಳಿದರು. ಆ ಶಿಕ್ಷಕರ ಪ್ರಶ್ನೆಯೆಂದರೆ, ಹಾಗಾದರೆ ನಾನು ಪಾಠ ಮಾಡುವುದು ಬರಿಯ ಅಂಕಗಳಿಸುವುದಕ್ಕೆ ಮಾತ್ರವಾದರೆ, ಕಲಿಕೆಯನ್ನು ಮತ್ತು ಪಠ್ಯವನ್ನು ಬದುಕಿನೊಂದಿಗೆ, ಪ್ರಸ್ತುತ ವಿದ್ಯಮಾನಗಳೊಂದಿಗೆ ಅನುಸಂಧಾನ ಮಾಡದೇ ಹೋದರೆ ಶಿ್ಷಣದ ಉದ್ದೇಶವೇನು? ಎಂದಾಗಿತ್ತು.

ಕಲಿಕೆಯ ವಿಷಯಗಳನ್ನು, ಪಠ್ಯದ ವಿಷಯಗಳನ್ನು ಯಾವುದೋ ಅನ್ಯಗ್ರಹದ ವಿಷಯಗಳಂತೆ ನೋಡುವುದಕ್ಕಾಗಲಿ, ಅವುಗಳನ್ನು ನಿತ್ಯ ಬದುಕಿನ ಜೊತೆಗೆ ಸಮೀಕರಿಸದೇ ಪ್ರತ್ಯೇಕಿಸುವುದಕ್ಕಾಗಲಿ ಸಾಧ್ಯವೇ ಇಲ್ಲ. ಹಾಗೂ ಅದು ಶಿಕ್ಷಣದ ಗುರಿಯೂ ಅಲ್ಲ. ಹಾಗೆಯೇ, ಮಕ್ಕಳು ತಾವು ಕಲಿಯುತ್ತಿರುವ ವಿಷಯಗಳನ್ನು ತಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳೊಂದಿಗೆ ತುಲನೆ ಮಾಡಿ ನೋಡುವುದನ್ನು ಕಲಿಯುವುದರೊಂದಿಗೆ ಜಾಗೃತಿ ಮತ್ತು ಅರಿವು ಒಟ್ಟೊಟ್ಟಿಗೇ ದೊರಕಿದರೇನೇ ಅವರು ಸಾಮಾಜಿಕವಾಗಿ ಸಮರ್ಥರಾಗುವಂತಹ ವ್ಯಕ್ತಿಗಳಾಗಿ ರೂಪುಗೊಳ್ಳುವುದು.

ಹೀಗೆಯೇ ಸಮುದಾಯ ಕಲ್ಯಾಣದ ಶಾಲೆಗಳು, ವಾಣಿಜ್ಯೋದ್ದೇಶದ ಶಾಲೆಗಳ, ಪರ್ಯಾಯ ಶಾಲೆಗಳ, ಜನಪ್ರಿಯ ಶಾಲೆಗಳ ಮತ್ತು ಮುಕ್ತಶಾಲೆಗಳ ಹೂರಣವೇನಿದೆಯೆಂದು ಮುಂದೆ ನೋಡೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News