ಇದು ತಬರನ ಕಥೆಯಲ್ಲ....!

Update: 2018-07-08 10:05 GMT

ಭಾಗ- 49

ಸರಕಾರಿ ಇಲಾಖೆಗಳಲ್ಲಿ ಕಂದಾಯ ಇಲಾಖೆಯು ಬಹಳಷ್ಟು ಭ್ರಷ್ಟ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಜನರನ್ನು ಮಣಿಸಲು ನಾನಾ ತಂತ್ರಗಳನ್ನು ಹೂಡಲಾಗುತ್ತದೆ.

ಸುಮಾರು 20 ವರ್ಷಗಳ ಹಿಂದೆ, ರಾಜ್ಯದಲ್ಲಿ ದಿವಂಗತ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರವಿದ್ದ ಕಾಲವದು. ಆ ಸಂದರ್ಭದಲ್ಲಿ ನಿರ್ಗತಿಕರಿಗೆ ವೃದ್ಧಾಪ್ಯ ವೇತನ ಆರಂಭಗೊಂಡಿತ್ತು. ಸುಮಾರು 500 ರೂ.ಗಳಷ್ಟು ಪಿಂಚಣಿ ಬರುತ್ತದೆ. ಅದಕ್ಕಾಗಿ ಅರ್ಜಿ ಸಲ್ಲಿಸಿದರೆ ಕಂದಾಯ ಇಲಾಖೆಯ ಮೂಲಕ ಮಂಜೂರು ಮಾಡಿಕೊಡಲಾಗುತ್ತಿತ್ತು. ಅವರ ಹೆಸರು ದೊಡ್ಡಣ್ಣ ಶೆಟ್ಟಿ, ಪಚ್ಚನಾಡಿಯವರು. ಹೆಸರು ಮಾತ್ರ ದೊಡ್ಡಣ್ಣ ಅವರು ಕಡು ಬಡವರಾಗಿದ್ದರು. ಮೂರು ಸೆಂಟ್ಸ್‌ನಷ್ಟು ಜಾಗದಲ್ಲಿ ಗುಡಿಸಲಲ್ಲಿ ವಾಸವಿದ್ದರು. ಅವರಿಗೆ ಕುಷ್ಠರೋಗ ಬೇರೆ ಇತ್ತು. ಅವರಿಗೆ ನಡೆದಾಡಲೂ ಸರಿಯಾಗಿ ಆಗುತ್ತಿರಲಿಲ್ಲ. ವೈದ್ಯಕೀಯ ಪ್ರಮಾಣಪತ್ರವನ್ನೂ ಅವರು ಹೊಂದಿದ್ದರು. ಇಷ್ಟೆಲ್ಲಾ ದೈಹಿಕ ನ್ಯೂನತೆ, ಬಡತನದಿಂದ ಬಳಲುತ್ತಿದ್ದ ಅವರು ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಸ್ಥಳ ಪರಿಶೀಲನೆಗೆ ಕಂದಾಯ ನಿರೀಕ್ಷಕರೊಬ್ಬರು ಬಂದಿದ್ದರು. ಅವರೊಬ್ಬ ನಿಯತ್ತಿನ ಅಧಿಕಾರಿ!

ಅದೆಷ್ಟು ನಿಯತ್ತು ಎಂದರೆ, ಮೂರು ತಿಂಗಳ ಪಿಂಚಣಿಯ ಹಣವನ್ನು ಮುಂಗಡವಾಗಿ ಅವರಿಗೆ ಕೊಡಬೇಕಾಗಿತ್ತು. ಅದು ಪಿಂಚಣಿ ಮಂಜೂರಾಗುವ ಮುಂಚಿತವಾಗಿ. ಕನಿಷ್ಠ ಎರಡು ತಿಂಗಳ ಅಥವಾ ನಾಲ್ಕು ತಿಂಗಳ ಪಿಂಚಣಿಯನ್ನೂ ಅವರು ಒಪ್ಪಿಕೊಳ್ಳದಂತಹ ನಿಯತ್ತಿನ ಅಧಿಕಾರಿ! ಇಲ್ಲವಾದಲ್ಲಿ ಪಿಂಚಣಿ ಮಂಜೂರೇ ಆಗುತ್ತಿರಲಿಲ್ಲ! ದೊಡ್ಡಣ್ಣ ಶೆಟ್ಟಿ, ತನಗೆ ಬಂದ ಮೂರು ತಿಂಗಳ ಪಿಂಚಣಿ ನೀಡುವುದಾಗಿ ಹೇಳಿದರು. ಆದರೆ ಆ ಅಧಿಕಾರಿ ಅದಕ್ಕೆ ಒಪ್ಪಲಿಲ್ಲ. ಕೆಲ ದಿನಗಳ ನಂತರ ದೊಡ್ಡಣ್ಣ ಶೆಟ್ಟಿಗೆ ಪತ್ರವೊಂದು ಬಂತು. ಅದರಲ್ಲಿ ನೀವು ನಿರ್ಗತಿಕರಲ್ಲದ ಕಾರಣ ನಿಮಗೆ ಪಿಂಚಣಿ ತಿರಸ್ಕರಿಸಲಾಗಿದೆ ಎಂದು ತಹಶೀಲ್ದಾರರಿಂದ ಒಕ್ಕಣೆ ನೀಡಲಾಗಿತ್ತು. ಆಗ ಅಲ್ಲಿನ ಸ್ಥಳೀಯ ಯುವಕರ ಗುಂಪೊಂದಕ್ಕೆ ಈ ವಿಷಯ ತಿಳಿದು, ನನ್ನಲ್ಲಿಗೆ ಬಂದು ವಿಷಯ ವಿವರಿಸಿದರು. ನಾನು ಸಹಾಯಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಲು ತಿಳಿಸಿದೆ. ಅವರು ದೊಡ್ಡಣ್ಣ ಶೆಟ್ಟಿಯವರ ಸಹಿಯೊಂದಿಗೆ ಸಹಾಯಕ ಆಯುಕ್ತರಿಗೆ ಪತ್ರ ಬರೆದರು. ಎಸಿಯಿಂದ ಒಂದು ವಾರದೊಳಗೆ ಉತ್ತರ ಬಂದಿತ್ತು. ‘ತಹಶೀಲ್ದಾರರ ನಿರ್ಧಾರವನ್ನು ಮರು ಪರಿಶೀಲಿಸಲು ಆಗದ ಕಾರಣ, ತಮ್ಮ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂಬ ಉತ್ತರ ಅದಾಗಿತ್ತು!

ಆಗ ನಾನು ಜಿಲ್ಲಾಧಿಕಾರಿಗೆ ಪತ್ರವೊಂದನ್ನು ಬರೆದೆ. ಕಂದಾಯ ಇಲಾಖೆಯ ನಿರೀಕ್ಷಕರ ನಿರ್ಧಾರವನ್ನು ಬದಲಾಯಿಸಲು ತಹಶೀಲ್ದಾರರಿಗೆ ಆಗಿಲ್ಲ. ತಹಶೀಲ್ದಾರರ ನಿರ್ಧಾರವನ್ನು ಬದಲಾಯಿಸಲು ಸಹಾಯಕ ಆಯುಕ್ತರಿಗೆ ಆಗಿಲ್ಲ. ಇದೀಗ ಸಹಾಯಕ ಆಯುಕ್ತರ ನಿರ್ಧಾರವನ್ನು ನಿಮಗೆ ಬದಲಾಯಿಸಲು ಸಾಧ್ಯವಿದೆಯೇ ತಿಳಿಸಿ. ಇಲ್ಲವಾದಲ್ಲಿ ನೀವೆಲ್ಲಾ ಮನೆಗೆ ಹೋಗಿ. ಇಲಾಖೆಗೆ ಕೇವಲ ಕಂದಾಯ ನಿರೀಕ್ಷಕರು ಮಾತ್ರವೇ ಸಾಕು ಎಂಬ ಬಹಿರಂಗ ಪತ್ರ ನನ್ನದಾಗಿತ್ತು. ಇದು ಜಿಲ್ಲಾಧಿಕಾರಿಗೆ ಮುಜುಗುರ ಉಂಟು ಮಾಡಿರಬೇಕು. ಕಾರಣ ನಾನು ಅದರಲ್ಲಿ ದೊಡ್ಡಣ್ಣ ಶೆಟ್ಟಿಯವರ ಪರಿಸ್ಥಿತಿಯನ್ನೂ ವಿವರಿಸಿದ್ದೆ. ಅವರಿಗೆ ದೈಹಿಕ ನ್ಯೂನತೆ ಬಗ್ಗೆ ನೀಡಲಾದ ವೈದ್ಯಕೀಯ ಪ್ರಮಾಣ ಪತ್ರದ ಬಗ್ಗೆಯೂ ಉಲ್ಲೇಖಿಸಿದ್ದೆ. ಅವರು ತಕ್ಷಣ ದೊಡ್ಡಣ್ಣ ಶೆಟ್ಟಿಯವರನ್ನು ಕರೆಯಿಸಿ ತನಿಖೆ ಮಾಡಿಸಿ ಅವರಿಗೆ ಪಿಂಚಣಿ ಮಂಜೂರು ಮಾಡಲಾಯಿತು. ಹೀಗೆ ವ್ಯಕ್ತಿಯೊಬ್ಬ ನಿರ್ಗತಿಕನಾಗಿದ್ದರೂ, ಅವನಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಕ್ಕಾಗಿ ಆತ ಅದೆಷ್ಟು ಸಮಯ ಕಾಯಬೇಕು, ಅದೆಷ್ಟು ಪಾಡು ಪಡಬೇಕೆಂಬುದು ಅದಕ್ಕಾಗಿ ಅಲೆದಾಡಿದವರಿಗೆ ಮಾತ್ರವೇ ತಿಳಿದಿರುತ್ತದೆ. ನನಗೆ ಕೆಲವು ಅಧಿಕಾರಿಗಳ ಬಗ್ಗೆ ಅರಿವಿದೆ. ಅವರು ತಮ್ಮ ಮನೆಯಲ್ಲಿ ಕೆಲಸಕ್ಕಿರುವವರಿಗೆ ಅರ್ಧ ವೇತನ ತಾವು ನೀಡುವುದು, ಉಳಿದರ್ಧ ವೇತನವನ್ನು ಈ ರೀತಿ ಪಿಂಚಣಿ ಹಣವನ್ನು ತೆಗೆಸಿ ಮೋಸ ಮಾಡುತ್ತಿದ್ದ ಪ್ರಕರಣಗಳನ್ನೂ ನಾನು ಕಂಡಿದ್ದೇನೆ. ಇದು ಸುಮಾರು 20 ವರ್ಷಗಳಿಗೂ ಹಳೆಯ ಪ್ರಕರಣ. ಅವರ ಹೆಸರು ನಾರಾಯಣ ರಾವ್. ಸುರತ್ಕಲ್ ಕಾನದ ನಿವಾಸಿ. ಮಣಿಪಾಲ ಇಂಡಸ್ಟ್ರೀಸ್‌ನಲ್ಲಿ ಚಾಲಕರಾಗಿದ್ದರು. ಅವರ ಒಬ್ಬನೇ ಮಗ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಸಾವಿಗೀಡಾಗಿದ್ದ. ಆಗ ಒಂದು ಯೋಜನೆ ಜಾರಿಯಲ್ಲಿತ್ತು. ವಾರ್ಷಿಕ ಇಂತಿಷ್ಟು ವರಮಾನವಿದ್ದವರು ತೀರಿಕೊಂಡಾಗ ಅವರ ಕುಟುಂಬಿಕರಿಗೆ ಸುಮಾರು 50,000 ರೂ.ನಷ್ಟು ಪರಿಹಾರ ಮೊತ್ತ ಕೊಡುವ ಯೋಜನೆ. ನಾರಾಯಣ ರಾವ್‌ರವರು ತಮ್ಮ ಪುತ್ರನ ಮರಣ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಿದ್ದರು.

ಕಂದಾಯ ಇಲಾಖೆಯ ನಿರೀಕ್ಷಕರೊಬ್ಬರು, ಇದು ಸರಕಾರಿ ಹಣ, ಸುಲಭದಲ್ಲಿ ಸಿಗಲಿಕ್ಕಿಲ್ಲ ಎಂದು ಅವರಲ್ಲಿ ಹೇಳಿದ್ದರು. ಅವರಿಗೆ ಏನೆಂದು ಅರ್ಥವಾಗಿರಲಿಲ್ಲ. ಅವರು ಆಗಾಗ್ಗೆ ತಹಶೀಲ್ದಾರರ ಬಳಿ ತಮ್ಮ ಅರ್ಜಿ ಏನಾಯಿತೆಂದು ವಿಚಾರಿಸಲು ಹೋಗಿ ಹೋಗಿ ಸುಸ್ತಾದರು. ಒಂದೊಂದು ಬಾರಿ ಒಂದೊಂದು ಉತ್ತರ, ಅದು ಎಸಿ ಕಚೇರಿಯಲ್ಲಿದೆ, ಅದು ಡಿಸಿ ಕಚೇರಿಯಲ್ಲಿದೆ. ಅಲ್ಲಿ ಕೇಳಿದರೆ, ಅದು ಇನ್ಶೂರೆನ್ಸ್ ಕಚೇರಿಯಲ್ಲಿದೆ ಎಂಬ ಹಾರಿಕೆಯ ಉತ್ತರ. ಸುಮಾರು ಆರು ತಿಂಗಳ ಅಲೆದಾಟದ ಬಳಿಕ ಅವರು ನನ್ನ ಬಳಿಗೆ ಬಂದಿದ್ದರು. ಆಗ ನಾನು ಫ್ಯಾಕ್ಸ್ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದೆ. ಜಿಲ್ಲಾಧಿಕಾರಿಯವರು ಮನವಿ ಪರಿಶೀಲಿಸಿ ಒಂದು ತಿಂಗಳೊಳಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿ ಕಳುಹಿಸಿದ್ದರು. ಆದರೆ ಎರಡು ತಿಂಗಳಾದರೂ ಏನೂ ಪ್ರತಿಕ್ರಿಯೆ ದೊರಕಲಿಲ್ಲ. ಸುಮಾರು ಒಂದು ವರ್ಷ ಕಾಲ ನಾರಾಯಣ ರಾವ್ ಅಲೆದಾಡಿದ್ದೇ ಅಲೆದಾಡಿದ್ದು. ಕೊನೆಗೆ ನಾನು ನಾರಾಯಣ ರಾವ್‌ವರ ಸಂಕಷ್ಟಗಳ ಬಗ್ಗೆ ಪತ್ರಿಕೆಯಲ್ಲಿ ಬರೆದೆ. ಅದು ಆಗ ಆಂಗ್ಲ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದು ಜಿಲ್ಲಾಧಿಕಾರಿ ಗಮನಕ್ಕೆ ನೇರವಾಗಿ ಬರುವಂತಾಯಿತು. ಇನ್ಶೂರೆನ್ಸ್ ಕಂಪೆನಿ, ಜಿಲ್ಲಾಧಿಕಾರಿಯನ್ನೂ ನಾನು ಆರೋಪಿಸಿದ್ದೆ. ನನಗೆ ಇನ್ಶೂರೆನ್ಸ್ ಕಂಪೆನಿಯಿಂದ ಕರೆ ಬಂತು. ನಮ್ಮ ವಿರುದ್ಧ ನಿಮ್ಮ ಆರೋಪ ಯಾಕೆ ಎಂಬುದು ಅವರ ಪ್ರಶ್ನೆಯಾಗಿತ್ತು. ನೀವು ಹಣ ಕೊಟ್ಟಿಲ್ಲ. ಅದಕ್ಕೆ ಬರೆದಿರುವುದು ಎಂದೆ. ನಮಗೆ ದಾಖಲೆ ಪತ್ರಗಳು ಬಂದಿಲ್ಲ ಎಂದು ಇನ್ಶೂರೆನ್ಸ್ ಕಂಪೆನಿಯವರು ಹೇಳಿದರು. ಅದು ನನಗೆ ಗೊತ್ತಿಲ್ಲ. ಅದನ್ನು ಪತ್ರಿಕೆಯವರಲ್ಲಿ ಹೇಳಿ ಎಂದೆ. ನಮಗೆ ಒಂದು ವೇಳೆ ದಾಖಲೆ ಪತ್ರಗಳು ಬಂದಿದ್ದಲ್ಲಿ ಒಂದು ದಿನದೊಳಗೆ ಚೆಕ್ ನೀಡುವುದಾಗಿ ಅವರು ಹೇಳಿಕೆಯನ್ನೂ ನೀಡಿದರು. ಇದಾಗಿ ಮರುದಿನ ನಾರಾಯಣ ರಾವ್ ತಮ್ಮ ಮನೆಯಲ್ಲಿದ್ದರು. ಸಂಜೆ ತಾಲೂಕು ಕಚೇರಿಯಿಂದ ಸಿಬ್ಬಂದಿಯೊಬ್ಬ ಅವರ ಮನೆಗೆ ಬಂದಿದ್ದ. ಆತನನ್ನು ನೋಡಿ ಇವರಿಗೆ ಅಚ್ಚರಿ. ಏನು ಎಂದು ವಿಚಾರಿಸಿದಾಗ, ತಹಶೀಲ್ದಾರರು ನಿಮ್ಮನ್ನು ಕರೆಯುತ್ತಾರೆ ಎಂದ. ಇವರ ಮನೆ ಗುಡ್ಡದ ಮೇಲೆ. ಅಲ್ಲಿಗೆ ವಾಹನ ಹೋಗುತ್ತಿರಲಿಲ್ಲ. ಹಾಗಾಗಿ ತಹಶೀಲ್ದಾರ್ ವಾಹನದಲ್ಲಿ ಕೆಳಗೆ ನಿಂತು ಆತನನ್ನು ಬರುವಂತೆ ಹೇಳಿಕಳುಹಿಸಿದ್ದರು.

ನಾರಾಯಣ ರಾವ್‌ಗೆ ಕೂಡಾ ಸ್ವಲ್ಪ ಅಷ್ಟು ಹೊತ್ತಿಗಾಗಲೇ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದು ಅರಿವಾಗಿತ್ತು. ಅವರು ಸಿಬ್ಬಂದಿಗೆ ನಾನು ಅಲ್ಲಿಗೆ ಬರುವುದಿಲ್ಲ ಎಂದು ಹೇಳಿ ಕಳುಹಿಸಿದರು. ಸಿಬ್ಬಂದಿ ತಹಶೀಲ್ದಾರರಿಗೆ ಈ ವಿಷಯ ಮುಟ್ಟಿಸಿದಾಗ, ಅವರಿಗೆ ಸಿಟ್ಟು ಬಂತು. ನಾನು ಬರಲು ಹೇಳಿದ್ದೇನೆಂದು ತಿಳಿಸು ಎಂದರು. ಆತ ಮತ್ತೆ ಹೋಗಿ ಬರಲು ಹೇಳಿದಾಗ ಇವರು ಹಠ ಬಿಡಲಿಲ್ಲ. ಕೊನೆಗೆ ತಹಶೀಲ್ದಾರರೇ ಮನೆಗೆ ಹೋಗಿ ನಾರಾಯಣ ರಾವ್‌ರಿಂದ ದಾಖಲೆ ಪತ್ರಗಳಿಗೆ ಸಹಿ ಪಡೆದು ಹೋದರು. ಇದಾಗಿ ಎರಡು ದಿನಗಳಲ್ಲಿ ಪರಿಹಾರದ ಚೆಕ್ ನಾರಾಯಣ ರಾವ್‌ಗೆ ತಲುಪಿತ್ತು. ನನಗೆ ಇತ್ತಕಡೆಯಿಂದ ಇನ್ಶೂರೆನ್ಸ್ ಕಂಪೆನಿಯಿಂದ ಕರೆ ಬಂದಿತ್ತು. ನಾವು ಇಂದು 10 ಪರಿಹಾರದ ಚೆಕ್‌ಗಳನ್ನು ನೀಡಿದ್ದೇವೆ ಎಂದು ಅವರು ಹೇಳಿದಾಗ ನನಗೆ ಅಚ್ಚರಿ. 10 ಚೆಕ್ ಯಾಕಾಗಿ ಎಂದು ಪ್ರಶ್ನಿಸಿದರೆ, ನಾರಾಯಣ ರಾವ್ ಜತೆಗೆ ಇತರ ಒಂಬತ್ತು ಮಂದಿಯ ಚೆಕ್ ಕೂಡಾ ವಿತರಣೆಯಾಗಿತ್ತು. ಒಬ್ಬರಿಗೆ ನ್ಯಾಯಕ್ಕಾಗಿ ನಡೆಸಿದ ಹೋರಾಟದಿಂದ ಇತರರಿಗೂ ಪ್ರಯೋಜನವಾಗುವಂತಾಯಿತು.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News