ಆ್ಯಂಬುಲೆನ್ಸ್ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲು ಪರಮೇಶ್ವರ್ ಸೂಚನೆ

Update: 2018-07-08 11:58 GMT

ಬೆಂಗಳೂರು, ಜು. 8: ಗಣ್ಯ ವ್ಯಕ್ತಿಗಳ ಸಂಚಾರದ ವೇಳೆ ಆ್ಯಂಬುಲೆನ್ಸ್ ವಾಹನಗಳಿಗೆ ಯಾವುದೇ ರೀತಿಯ ತೊಂದರೆಯಿಲ್ಲದೆ ಮುಕ್ತವಾಗಿ ಸಂಚರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪೊಲೀಸ್ ಮಹಾನಿರ್ದೇಶಕಿ ಮತ್ತು ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ.

ಗೃಹ ಸಚಿವರು ಸೇರಿದಂತೆ ಇತರೆ ವಿಐಪಿಗಳಿಗೆ ನೀಡಿರುವ ಶಿಷ್ಟಾಚಾರ ಬದಿಗೊತ್ತಿ ಗಣ್ಯರ ಸಂಚಾರದ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ನಿರೀಕ್ಷಕರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಗಣ್ಯರು ಸಂಚರಿಸುವಾಗ ಆ್ಯಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಆ್ಯಂಬುಲೆನ್ಸ್‌ಗಳಿಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆ್ಯಂಬುಲೆನ್ಸ್ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ತಾವು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಚರಿಸುವ ಮಾರ್ಗಗಳಲ್ಲಿ ಶಿಷ್ಟಾಚಾರದಂತೆ ಸಂಚಾರ ಮುಕ್ತ(ಟ್ರಾಫಿಕ್‌ಫ್ರೀ) ಮಾಡುವ ಸಲುವಾಗಿ ಕೆಲವು ಬಾರಿ ಆ್ಯಂಬುಲೆನ್ಸ್ ವಾಹನಗಳನ್ನು ತಡೆದು ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಆ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಪರಮೇಶ್ವರ್ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News