×
Ad

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗಾಗಿ ಪೋಷಕರ ಪಟ್ಟು

Update: 2018-07-08 17:49 IST

ಬೆಂಗಳೂರು, ಜು.8: ಸಾಫ್ಟ್‌ವೇರ್ ಇಂಜಿನಿಯರ್ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣವನ್ನು ಈ ಕೂಡಲೇ ರಾಜ್ಯ ಸರಕಾರ ಸಿಬಿಐ ತನಿಖೆಗೊಳಪಡಿಸಬೇಕು ಎಂದು ಕುಮಾರ್ ಅಜಿತಾಬ್ ಪೋಷಕರು, ಸಉದ್ಯೋಗಿಗಳು ಒತ್ತಾಯಿಸಿದರು.

ರವಿವಾರ ನಗರದ ಪುರಭವನದ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ ನೂರಾರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಹಾಗೂ ಕುಮಾರ್ ಅಜಿತಾಬ್ ಕುಟುಂಬ ಸದಸ್ಯರು, ನಾಪತ್ತೆ ಪ್ರಕರಣವನ್ನು ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಹೀಗಾಗಿ, ಗಂಭೀರ ಪ್ರಕರಣವೆಂದು ಪರಿಗಣಿಸಿ ಸಿಬಿಐ ತನಿಖೆಗೊಳಪಡಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಜಿತಾಬ್ ಸಹೋದರಿ ಪ್ರಗ್ಯಾ ಸಿನ್ಹಾ, ವೈಟ್‌ಫೀಲ್ಡ್‌ನಲ್ಲಿ ವಾಸಿಸುತ್ತಿದ್ದ ಅಜಿತಾಬ್ 2017ರ ಡಿ.18 ರಂದು ಮನೆಯಿಂದ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಲು ಹೋದ ಬಳಿ ವಾಪಸ್ಸು ಆಗಿಲ್ಲ. ಈ ಸಂಬಂಧ ವೈಟ್‌ಫಿಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ 6 ತಿಂಗಳಾದರೂ ಕಾಣೆಯಾದವರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದರು.

ಈ ಪ್ರಕರಣ ಸಂಬಂಧ ಸಿಐಡಿ ತನಿಖೆ ಕೈಗೊಂಡಿದ್ದರೂ, ಯಾವುದೇ ರೀತಿಯ ಮಾಹಿತಿ ದೊರೆತಿಲ್ಲ. ಸಾಮಾನ್ಯ ಪ್ರಕರಣದಲ್ಲಿ ತನಿಖೆ ನಡೆಸುವಂತೆ ನಡೆಸಲಾಗುತ್ತಿದೆ ಎಂದ ಅವರು, ಒಎಲ್‌ಎಕ್ಸ್‌ನಲ್ಲಿ ಗ್ರಾಹಕರ ಜೊತೆ ಅಜಿತಾಬ್ ಮಾತನಾಡಿದ ಸಂಭಾಷಣೆ, ಮೊಬೈಲ್ ದೂರವಾಣಿ ಕರೆಗಳನ್ನು ಹಾಗೂ ಅದರ ವಿವರಗಳನ್ನು, ಗೂಗಲ್‌ಗೆ ಸಂಬಂಧಿಸಿದ ವಿವರಗಳನ್ನು ಪಡೆಯುವಲ್ಲಿ ವಿಫಲವಾಗಿದ್ದು, ಸಿಐಡಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ, ಸಿಬಿಐಗೆ ವಹಿಸಬೇಕು ಎಂದು ಕೋರಿದರು.

ಅಜಿತಾಬ್ ಸಹದ್ಯೋಗಿ ಅರವಿಂದ ಮಾತನಾಡಿ, ವಿದೇಶಿ ಕಂಪೆನಿಗಳು ನಮ್ಮ ದೇಶದಲ್ಲಿ ಹಣ ಸಂಪಾದನೆಗೆ ಮುಂದಾಗಿದ್ದು, ನಮ್ಮಂತವರ ಮಾಹಿತಿ ಸಂಗ್ರಹಿಸುತ್ತದೆ. ಅವುಗಳ ಮೇಲೆ ಭಾರತೀಯ ಕಾನೂನು(ನೀತಿ ಸಂಹಿತೆ) ಹೇರಿದರೆ ಮಾತ್ರ ಇಂತಹ ಘಟನೆಗಳು ಸಂಭವಿಸುವುದಿಲ್ಲ ಎಂದು ತಿಳಿಸಿದರು.

ಜು.9 ರಂದು ಸಿಎಂ-ಡಿಸಿಎಂಗೆ ಮನವಿ
ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣ ಸಂಬಂಧ ಇಂದು(ಜು.9) ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿ, ಸಿಬಿಐ ತನಿಖೆವಹಿಸಲು ಒತ್ತಾಯಿಸಲಾಗುವುದು ಎಂದು ಪ್ರಗ್ಯಾ ಸಿನ್ಹಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News