ಕಾನೂನುಗಳಿಂದ ಮಾನವ ಹಕ್ಕುಗಳ ರಕ್ಷಣೆ ಅಸಾಧ್ಯ: ಎಸ್.ಆರ್.ನಾಯಕ್
ಬೆಂಗಳೂರು, ಜು. 8: ಶಾಸಕಾಂಗ ರೂಪಿಸಿದ ಕಾನೂನುಗಳಿಂದ ಮಾನವ ಹಕ್ಕುಗಳ ರಕ್ಷಣೆ ಅಸಾಧ್ಯ. ಮಾನವ ಹಕ್ಕುಗಳ ಆಯೋಗದ ಕಚೇರಿಯಲ್ಲೇ ಈ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಎಸ್.ಆರ್.ನಾಯಕ್ ಹೇಳಿದ್ದಾರೆ.
ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ, ಮಾನವಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ‘ಮಾನವ ಹಕ್ಕಿನ ಇಂದಿನ ಸ್ಥಿತಿಗತಿ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ನಾನು, ಈ ಹಿಂದೆ ಆಯೋಗದ ಅಧ್ಯಕ್ಷನಾಗಿದ್ದ ವೇಳೆ ಮನವರಿಕೆಯಾಗಿದೆ. ವೇತನ, ರಜೆ ಸೇರಿದಂತೆ ಹಲವು ವಿಚಾರಗಳಲ್ಲಿ ಅಲ್ಲಿ ಸಾಮಾಜಿಕ ಅಸಮಾನತೆ ಇದೆ’ ಎಂದು ಆರೋಪಿಸಿದರು.
ಪ್ರತಿಯೊಬ್ಬರಿಗೂ ಬೌದ್ಧಿಕವಾಗಿ ಬೆಳೆಯಲು ಶಿಕ್ಷಣ ಮುಖ್ಯವಾಗಿದ್ದು, ಅದನ್ನು ಎಲ್ಲರಿಗೂ ದೊರಕುವಂತೆ ಮಾಡುವ ಜವಾಬ್ದಾರಿ ಆಳುವ ಸರಕಾರಗಳಿಗೆ ಇರುತ್ತದೆ. ಭಗವಾನ್ ಬುದ್ಧ ಸಮಾಜದಲ್ಲಿ ಮಾನವರಿಗೆ ಸಿಗಬೇಕಾದ ಕನಿಷ್ಠ ಹಕ್ಕುಗಳನ್ನು ಕುರಿತು ಪ್ರಸ್ಥಾಪಿಸಿದ್ದರು. ಆದರೆ, ನಾವು ಬುದ್ಧ ಸಾರಿದ ಯಾವುದನ್ನು ಪಾಲಿಸಲಿಲ್ಲ. ಅನಂತರ ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ್, ನಾರಾಯಣ ಗುರು, ಪುಲೆ ಸೇರಿದಂತೆ ಹಲವರು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದ್ದಾರೆ. ಅವರನ್ನು ಇಂದಿನ ಸಮಾಜದಲ್ಲಿ ಯಾರೂ ಪಾಲನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಹಲವು ರೀತಿಯಲ್ಲಿ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಜನರಿಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಹೀಗಾಗಿ, ಮಾನವ ಹಕ್ಕುಗಳ ರಕ್ಷಣೆಗೆ ವೇದಿಕೆಯ ಕಾರ್ಯಕರ್ತರು ಮುಂದಾಗಬೇಕು ಎಂದು ಸಲಹೆ ನೀಡಿದರು.
ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಮಾತನಾಡಿ, ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ತೂರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೇನೆ ಪ್ರತಿ ದಾಳಿ ನಡೆಸುತ್ತದೆ. ಹೀಗಾಗಿ, ಕೆಲವರು ಸೇನೆಯ ಮೇಲೆ ಮಾನವಹಕ್ಕುಗಳ ಉಲ್ಲಂಘನೆ ಬಗ್ಗೆ ಟೀಕೆ ಮಾಡುತ್ತಾರೆ. ಈ ರೀತಿಯ ಟೀಕೆ ಮಾಡುವವರು ಸೈನಿಕರೂ ಕೂಡ ನಮ್ಮ ಹಾಗೇ ಮಾನವರು ಎಂಬುವುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ, ಸಾಹಿತಿ ಪುಸ್ತಕ ಮನೆ ಹರಿಪ್ರಿಯ, ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತರಿದ್ದರು.