ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ: ಸೋಮವಾರ ಶಿಕ್ಷೆ ಪ್ರಕಟ
ಬೆಂಗಳೂರು, ಜು.8: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ನಗರದ ಎನ್‌ಎಐ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ ಮೂವರು ಆರೋಪಿಗಳಿಗೆ ಸೋಮವಾರ ಶಿಕ್ಷೆ ಪ್ರಕಟವಾಗಲಿದೆ.
ಬಾಂಬ್ ಸ್ಫೋಟಕ್ಕೆ ಒಳಸಂಚು ಹಾಗೂ ಪ್ರಮುಖ ಆರೋಪಿಗಳಿಗೆ ಸಹಕಾರ ನೀಡಿದ ಆರೋಪದಡಿಯಲ್ಲಿ ಬಂಧಿತರಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದ ಆರೋಪಿಗಳಾದ ಕಮಲ್ ಹಸನ್, ಗೊಹರ್ ಅಜೀಜ್ ಖೊಮೆನಿ ಹಾಗೂ ಕಪಿಲ್ ಅಖ್ತರ್ ಅವರಿಗೆ ನ್ಯಾಯಮೂರ್ತಿ ಸಿದ್ದಲಿಂಗ ಪ್ರಭು ಅವರು ಶಿಕ್ಷೆ ಪ್ರಕಟಿಸಲಿದ್ದಾರೆ.
ತಪ್ಪೊಪ್ಪಿಕೊಂಡಿರುವ ಆರೋಪಿಗಳಿಗೆ ತಮ್ಮ ನಿರ್ಧಾರದ ಬಗ್ಗೆ ಮತ್ತೊಂದು ಬಾರಿ ಯೋಚಿಸಲು ನ್ಯಾಯಾಲಯ ಈಗಾಗಲೇ ಕಾಲಾವಕಾಶ ಕಲ್ಪಿಸಿದೆ. ಆರೋಪಿಗಳು ಸೋಮವಾರ ತಮ್ಮ ಹಿಂದಿನ ನಿರ್ಧಾರ ಸಮರ್ಥಿಸಿಕೊಳ್ಳುತ್ತಾರೆಯೇ ಅಥವಾ ಉಲ್ಟಾ ಹೇಳಿಕೆ ನೀಡುತ್ತಾರೆಯೇ ಎಂಬುದು ಸದ್ಯ ಕುತೂಹಲಕಾರಿ ಪ್ರಶ್ನೆಯಾಗಿ ಉಳಿದಿದೆ.
ಶಿಕ್ಷೆ ಪ್ರಕಟಕ್ಕೂ ಮುನ್ನ ವಿಚಾರಣೆ: ಸೋಮವಾರ ಬೆಳಗ್ಗೆ 10.45ಕ್ಕೆ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ. ಪ್ರಕರಣ ಸಂಬಂಧ ಆರೋಪಿಗಳಿಂದ ಮತ್ತೊಮ್ಮೆ ನ್ಯಾಯಾಲಯ ಹೇಳಿಕೆ ಪಡೆಯಲಿದೆ. ಬಳಿಕ ಸರಕಾರಿ ಅಭಿಯೋಜಕರು ಹಾಗೂ ಆರೋಪಿಗಳ ಪರ ವಕೀಲರು ಶಿಕ್ಷೆ ಪ್ರಮಾಣದ ಕುರಿತು ನ್ಯಾಯಾಲಯದ ಮುಂದೆ ವಾದ-ಪ್ರತಿವಾದ ಮಂಡಿಸಲಿದ್ದಾರೆ.
ಈಗಾಗಲೇ ಸರಕಾರಿ ವಕೀಲರು ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಹಾಗೂ ದಂಡ ವಿಧಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಯಾವ ಶಿಕ್ಷೆ ವಿಧಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.