ಗಾಂಧೀಜಿ ಮೇಲಿದ್ದ ಗೌರವ ಕಡಿಮೆ ಆಗಿದೆ: ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್
ಬೆಂಗಳೂರು, ಜು.8: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಕುರಿತ ಪುಸ್ತಕ ಓದಿದ ನಂತರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮೇಲಿದ್ದ ಗೌರವ ಕಡಿಮೆ ಆಗಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ನಗರದ ಬಸವನಗುಡಿಯ ಗಾಯನ ಸಮಾಜ ಸಭಾಂಗಣದಲ್ಲಿ ವಿದ್ಯಾಶ್ರೀ ಪ್ರಕಾಶನ, ಮನ್ನಾರ್ ಬಿಸಿನೆಸ್ ಹೌಸ್ ಹಾಗೂ ಸಮೇಧ ಅಕ್ಯುಪಂಕ್ಚರ್ ಚಿಕಿತ್ಸಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಮ.ಸು.ಮನ್ನಾರ್ ಕೃಷ್ಣ ರಾವ್ ರಚಿಸಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸ್ಪರ್ಧಿಸಿದಾಗ ಅಡ್ಡಿಪಡಿಸಿದರು. ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೂ, ಅವರಿಂದ ರಾಜೀನಾಮೆ ಕೊಡಿಸಿದ್ದರು. ಇನ್ನು ರಾಜಾಜಿ ಅವರಿಗೆ ನಾಮಿನೇಷನ್ ಹಾಕಲು ಅವಕಾಶ ನೀಡಲಿಲ್ಲ. ಹೀಗಾಗಿ, ಗಾಂಧೀಜಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಹೊಂದಿರಲಿಲ್ಲ ಎನಿಸುತ್ತದೆ. ಹೀಗಾಗಿ ಅವರ ಮೇಲೆ ಹೊಂದಿದ್ದ ಗೌರವ ಪುಸ್ತಕ ಓದಿದ ನಂತರ ಕಡಿಮೆಯಾಗಿದೆ ಎಂದು ಹೇಳಿದರು.
ಪಟೇಲರು ಅಧ್ಯಕ್ಷರಾಗಬೇಕೆಂದು ಸಮಿತಿಯಲ್ಲಿದ್ದ 15 ಜನರ ಪೈಕಿ 12 ಜನ ಹೇಳಿದ್ದರೂ, ಗಾಂಧೀಜಿ ಮಾತ್ರ ನೆಹರೂ ಅವರನ್ನು ಆಯ್ಕೆ ಮಾಡುತ್ತಾರೆ. ನಂತರ ಎಲ್ಲರೂ ಅವರ ಮಾತಿಗೆ ಬೆಲೆ ಕೊಟ್ಟು ನೆಹರೂ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಸ್ಥಾನ ಬಿಟ್ಟುಕೊಟ್ಟ ಪಟೇಲರಿಗೆ ನೆಹರೂ ಅವರು ಪ್ರಧಾನಿಯಾಗಿದ್ದ 17 ವರ್ಷಗಳು, ಅವರ ಮಗಳು ಇಂದಿರಾ ಪ್ರಧಾನಿಯಾಗಿದ್ದ 16 ವರ್ಷಗಳು ಹಾಗೂ ಮೊಮ್ಮಗ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ 5 ವರ್ಷಗಳಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಲಿಲ್ಲ. 41 ವರ್ಷಗಳ ನಂತರ ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ ಅವರೊಂದಿಗೆ ನೀಡಲಾಯಿತು, ಇದು ನಮ್ಮ ಭಾರತ ದೇಶದ ದುಸ್ಥಿತಿ ಎಂದು ಎನ್.ಕುಮಾರ್ ತಿಳಿಸಿದರು.
ಪಟೇಲ್ ಜೀವನದ ಕುರಿತು ಪುಸ್ತಕ ಓದಿದರೆ ಹಲವಾರು ವ್ಯಕ್ತಿಗಳ ಜೀವನ ಚರಿತ್ರೆ ಚಿತ್ರಣ ದೊರೆಯುತ್ತದೆ. ಅವುಗಳನ್ನು ಪರಿಶೀಲಿಸಿದಾಗ ತ್ಯಾಗ ಎಂದರೆ ಅದು ಪಟೇಲರು ಎಂಬುದು ಸ್ಪಷ್ಟವಾಗುತ್ತದೆ. ತಮಗೆ ಸ್ಥಾನ ತಪ್ಪಿದರೂ ಎಂದೂ ಅವರು ನೆಹರೂ ಅವರ ಕಾಲು ಎಳೆಯುವಂತಹ ಕೆಲಸ ಮಾಡಲಿಲ್ಲ. ದೇಶಕ್ಕೆ ಒಬ್ಬರೇ ಸರ್ದಾರ್ ಎಂದರು.
ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ, ಲೇಖಕ ಮ.ಸು.ಮನ್ನಾರ್ ಕೃಷ್ಣ ರಾವ್, ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‌ನ ಮುಖ್ಯಸ್ಥ ಡಾ.ಗುರುರಾಜ ಕರಜಗಿ ಸೇರಿ ಪ್ರಮುಖರಿದ್ದರು.