ಬಿಲ್ಲವ ಸಂಸ್ಕೃತಿ ಮುಂದುವರೆಸಿಕೊಂಡು ಹೋಗಬೇಕು: ಶಾಸಕ ಸುನೀಲ್ ಕುಮಾರ್

Update: 2018-07-08 14:57 GMT

ಬೆಂಗಳೂರು, ಜು.8: ತನ್ನದೇ ಆದ ಇತಿಹಾಸ ಹೊಂದಿರುವ ಬಿಲ್ಲವ ಸಮುದಾಯದ ಸಂಸ್ಕೃತಿ, ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದ ಬನ್ನೇರುಘಟ್ಟ ರಸ್ತೆಯ ಬಿಲ್ಲವ ಭವನದಲ್ಲಿ ಬಿಲ್ಲವ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ, ಸೇವಾದಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುವಂತೆ ನಮ್ಮ ಸಮುದಾಯದ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ನುಡಿದರು.

ಬೆಂಗಳೂರಿನ ಬಿಲ್ಲವ ಸಂಘ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ. ಸಂಘದ ಸೇವಾದಳದಿಂದ ಸಮುದಾಯ ಜನರಿಗೆ ಅನುಕೂಲವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಂಘದ ಅಧ್ಯಕ್ಷ ವೀರಕುಮಾರ್ ಮಾತನಾಡಿ, ಬಿಲ್ಲವ ಸಮುದಾಯ ಒಗ್ಗೂಡಬೇಕು. ಸಮುದಾಯ ಅಭಿವೃದ್ಧಿಗಾಗಿ ಸಂಘದಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳುತ್ತಿದ್ದೆವೆ. ಮಹಿಳಾ ವಿಭಾಗ, ಸ್ಪಾರ್ಕ್‌ವಿಂಗ್, ಸೇವಾದಳ ವಿಭಾಗ ಸಕ್ರಿಯವಾಗಿ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೀಡಾಪಟು ಗುರುರಾಜ ಪೂಜಾರಿ, ಸೇವಾದಳದ ಕುಮಾರ್ ಕೋಟ್ಯಾನ್, ಲೋಕನಾಥ್ ಪೂಜಾರಿ, ಸುರೇಶ್ ಎಚ್.ಎ.ಎಲ್ ಅವರನ್ನು ಸನ್ಮಾನಿಸಲಾಯಿತು. ಬಿಲ್ಲವ ಸಂಘದ ಉಪಾಧ್ಯಕ್ಷರಾದ ಎಂ.ರಮೇಶ್ ಬಂಗೇರ, ಕೇಶವ ಪೂಜಾರಿ, ಖಜಾಂಚಿ ಮಾಚ ಬಿಲ್ಲವ, ಸಂಘಟನಾ ಕಾರ್ಯದರ್ಶಿ ಉದಯ್ ಕುಮಾರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News