×
Ad

ಅಧ್ಯಯನ ಮಾಡಿದಷ್ಟು ಹೊಸ ವಿಚಾರಗಳು ಸಿಗುತ್ತವೆ: ಸಂಸದ ವೀರಪ್ಪ ಮೊಯ್ಲಿ

Update: 2018-07-08 21:37 IST

ಬೆಂಗಳೂರು, ಜು.8: ಸತ್ಯ, ಧರ್ಮ, ಶಾಂತಿ, ಪ್ರೇಮ ಹಾಗೂ ಅಹಿಂಸೆ ಎಂಬ 5 ಮೌಲ್ಯಗಳಿಂದ ರಾಮಾಯಣ ರಚಿತವಾಗಿದ್ದು, ಆಳವಾಗಿ ಅಧ್ಯಯನ ಮಾಡಿದಷ್ಟು ಹೊಸ ಹೊಸ ಅಂಶಗಳು ದೊರೆಯುತ್ತವೆ ಎಂದು ಸಂಸದ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಕಾರ್ಡ್ ರಸ್ತೆಯ ಇಸ್ಕಾನ್ ಮಲ್ಟಿವಿಷನ್ ಥಿಯೇಟರ್‌ನಲ್ಲಿ ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಸಂಸ್ಥೆ ವತಿಯಿಂದ ನಡೆಯುತ್ತಿರುವ ರಾಮಾಯಣ ಸಂದೇಶ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿಗೂ ಅನೇಕ ಬರಹಗಾರರಿಗೆ ರಾಮಾಯಣ ಸಾಹಿತ್ಯ ಸಾಮಗ್ರಿಯಾಗಿದೆ. 34 ವಿದೇಶಿ ಭಾಷೆಗಳಿಗೆ ಭಾಷಾಂತರವಾಗಿದ್ದು, 1000ಕ್ಕೂ ಹೆಚ್ಚು ರಾಮಾಯಣ ಆಧಾರಿತ ಕೃತಿಗಳು ಪ್ರಕಟಗೊಂಡಿವೆ ಎಂದು ಹೇಳಿದರು.

ಸಂಸ್ಕೃತಿಯ ವಾಹಕವಾಗಿರುವ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳು ಎಲ್ಲಾ ಕಾಲದಲ್ಲಿಯೂ ಪ್ರಸ್ತುತವಾಗಿದೆ. ಪ್ರಪಂಚದಲ್ಲಿಯೇ ರಾಮಾಯಣ ಹಾಗೂ ಮಹಾಭಾರತದಷ್ಟು ಸಂಸ್ಕೃತಿಯನ್ನು ಕಟ್ಟುವ ಕೆಲಸವನ್ನು ಬೇರೆ ಯಾವ ಕಾವ್ಯಗಳು ಮಾಡಿಲ್ಲ. ಭೂತ ವರ್ತಮಾನ ಹಾಗೂ ಭವಿಷ್ಯದಲ್ಲಿ ಸಂಸ್ಕೃತಿ ಜೀವಂತವಾಗಿರಬೇಕೆಂದರೆ ಜನರ ಮನದಲ್ಲಿ ಈ ಮಹಾಕಾವ್ಯಗಳು ನೆಲಸಬೇಕು ಎಂದರು.

ಸಂಸ್ಕೃತಿ ಹಾಗೂ ನಗರೀಕರಗಳನ್ನು ಹೋಲಿಕೆ ಮಾಡಿದರೆ ಮಹಾಭಾರತಕ್ಕಿಂತ ಮೊದಲು ರಾಮಾಯಣ ಸೃಷಿಯಾಗಿದೆ. ರಾಮಾಯಣವು ಭೌಗೋಳಿಕ ಹಿನ್ನೆಲೆಯಲ್ಲಿ ವಿವಿಧ ಸಂಸ್ಕೃತಿಯನ್ನು ವಿವರಿಸಿದ್ದು, ಮುಖ್ಯವಾಗಿ ಅಯೋಧ್ಯದ ಮೂಲಕ ನಗರ ಸಂಸ್ಕೃತಿ ಮೂಲಕ ಅರಣ್ಯ ಸಂಸ್ಕೃತಿ ಹಾಗೂ ಶ್ರೀಲಂಕಾದ ಮೂಲಕ ದ್ವೀಪ ಸಂಸ್ಕೃತಿಗಳನ್ನು ವಿಸ್ತಾರವಾಗಿ ವಿವರಿಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News