ವಿಶ್ವಕಪ್ ‘ಗೋಲ್ಡನ್ ಬೂಟ್’: ಕೇನ್-ಲುಕಾಕು ಪೈಪೋಟಿ

Update: 2018-07-08 18:42 GMT

ಮಾಸ್ಕೊ, ಜು.8: ಇಪ್ಪತ್ತೊಂದನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯು ಕೊನೆಯ ಹಂತಕ್ಕೆ ತಲುಪಿದ್ದು 3ನೇ ಸ್ಥಾನಕ್ಕಾಗಿ ನಡೆಯುವ ಪ್ಲೇ ಆಫ್ ಸಹಿತ ನಾಲ್ಕು ಪಂದ್ಯಗಳು ಆಡಲು ಬಾಕಿ ಉಳಿದಿವೆ. ಟೂರ್ನಿಯಲ್ಲಿ ಗರಿಷ್ಠ ಗೋಲು ಗಳಿಸುವ ಆಟಗಾರರಿಗೆ ನೀಡುವ ಪ್ರತಿಷ್ಠಿತ ‘ಗೋಲ್ಡನ್ ಬೂಟ್’ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬ ಕುತೂ ಹಲ ಮನೆ ಮಾಡಿದೆ.

ಈ ತನಕ ಟೂರ್ನಿಯಲ್ಲಿ ಒಟ್ಟು ಆರು ಗೋಲುಗಳನ್ನು ಗಳಿಸಿರುವ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಗರಿಷ್ಠ ಗೋಲ್ ಸ್ಕೋರರ್ ಎನಿಸಿಕೊಂಡಿದ್ದಾರೆ. ಸಹಜವಾಗಿಯೇ ‘ಗೋಲ್ಡನ್ ಬೂಟ್’ ಪ್ರಶಸ್ತಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆರು ವಿಶ್ವಕಪ್ ಗೋಲುಗಳನ್ನು ಗಳಿಸಿ ತಮ್ಮದೇ ದೇಶದ ಗ್ಯಾರಿ ಲಿನೆಕರ್ಸ್ ದಾಖಲೆ(6 ಗೋಲು) ಸರಿಗಟ್ಟಿದ್ದಾರೆ. ಲಿನೆಕರ್ಸ್ 1986ರ ವಿಶ್ವಕಪ್‌ನಲ್ಲಿ ಆರು ಗೋಲು ಬಾರಿಸಿ ಗಮನ ಸೆಳೆದಿದ್ದರು.

 ಬೆಲ್ಜಿಯಂನ ರೊಮೆಲು ಲುಕಾಕು 4 ಪಂದ್ಯಗಳಲ್ಲಿ ಒಟ್ಟು ನಾಲ್ಕು ಗೋಲುಗಳನ್ನು ಗಳಿಸಿದ್ದು, 24ರ ಹರೆಯದ ಇಂಗ್ಲೆಂಡ್ ನಾಯಕ ಕೇನ್‌ಗೆ ನಿಕಟ ಸ್ಪರ್ಧೆಯೊಡ್ಡುತ್ತಿದ್ದಾರೆ.

 ರಶ್ಯದ ಇಗೊರ್ ಚೆರಿಶೆವ್ ಹಾಗೂ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ತಲಾ 4 ಗೋಲುಗಳನ್ನು ಗಳಿಸಿದ್ದಾರೆ. ರಶ್ಯ ಹಾಗೂ ಪೋರ್ಚುಗಲ್ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರ ನಡೆದಿವೆ.

  ಇಂಗ್ಲೆಂಡ್ ಹಾಗೂ ಬೆಲ್ಜಿಯಂ ತಂಡಗಳು ಸೆಮಿ ಫೈನಲ್‌ನಲ್ಲಿ ಆಡುವುದರಿಂದ ಹ್ಯಾರಿ ಕೇನ್ ಹಾಗೂ ಲುಕಾಕುವಿಗೆ ವೈಯಕ್ತಿಕ ಗೋಲು ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳುವ ಅವಕಾಶ ಮುಕ್ತವಾಗಿದೆ.

ಸ್ಟ್ರೈಕರ್ ಕೇನ್ ಬೆಲ್ಜಿಯಂ ವಿರುದ್ಧ ಕೊನೆಯ ಗ್ರೂಪ್ ಪಂದ್ಯದಲ್ಲಿ ಆಡಿರಲಿಲ್ಲ. ಟೂರ್ನಿಯಲ್ಲಿ 4 ಪಂದ್ಯಗಳನ್ನು ಆಡಿರುವ ಕೇನ್ 6 ಗೋಲುಗಳನ್ನು ಗಳಿಸಿದ್ದಾರೆ.

‘ಗೋಲ್ಡನ್ ಬೂಟ್’ ಪ್ರಶಸ್ತಿಯನ್ನು 2010ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ನೀಡಲಾಗಿತ್ತು. ಅದಕ್ಕೆ ಮೊದಲು 1982 ರಿಂದ 2006ರ ತನಕ ‘ಗೋಲ್ಡನ್ ಶೂ’ ಪ್ರಶಸ್ತಿ ನೀಡಲಾಗುತ್ತಿತ್ತು. 1982ಕ್ಕಿಂತ ಮೊದಲು ಟೂರ್ನಮೆಂಟ್‌ನ ಅಗ್ರ ಗೋಲ್‌ಸ್ಕೋರರ್ ಎಂದು ಗುರುತಿಸಲಾಗುತ್ತಿತ್ತು. ಆದರೆ ಯಾವುದೇ ಪ್ರಶಸ್ತಿಯನ್ನು ನೀಡುತ್ತಿರಲಿಲ್ಲ.

2002ರಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನಲ್ಲಿ ಬ್ರೆಝಿಲ್‌ನ ರೊನಾಲ್ಡೊ ಗರಿಷ್ಠ 8 ಗೋಲುಗಳನ್ನು ಬಾರಿಸಿದ್ದರು. ಇದು 32 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಆಟಗಾರನೊಬ್ಬನ ಉತ್ತಮ ಸಾಧನೆಯಾಗಿತ್ತು.

ವಿಶ್ವಕಪ್‌ವೊಂದರಲ್ಲಿ ಗರಿಷ್ಠ ಗೋಲು ಗಳಿಸಿದ ದಾಖಲೆ ಫ್ರಾನ್ಸ್‌ನ ಜಸ್ಟ್ ಫೋಂಟೈನ್ ಹೆಸರಲ್ಲಿದೆ. 1958ರ ವಿಶ್ವಕಪ್‌ನಲ್ಲಿ ಒಟ್ಟು 13 ಗೋಲುಗಳನ್ನು ಗಳಿಸಿದ್ದರು. ಕೇನ್‌ಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಜಸ್ಟ್ ದಾಖಲೆ ಮುರಿಯಲು ಇನ್ನೂ 7 ಗೋಲು ಗಳಿಸಬೇಕಾಗಿದೆ.

2014ರ ವಿಶ್ವಕಪ್‌ನಲ್ಲಿ ಕೊಲಂಬಿಯಾದ ಜೇಮ್ಸ್ ರೋಡ್ರಿಗಸ್ ಒಟ್ಟು ಆರು ಗೋಲು ಗಳಿಸಿ ಗೋಲ್ಡನ್ ಬೂಟ್ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News