ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್‌ ಸ್ಫೋಟ ಪ್ರಕರಣ: ಮೂವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ

Update: 2018-07-09 14:45 GMT

ಬೆಂಗಳೂರು, ಜು.9: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ನಗರದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ ಮೂವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಆರೋಪಿಗಳಾದ ಕಮಲ್ ಹಸನ್, ಗೊಹರ್ ಅಝೀಝ್ ಖೊಮೆನಿ ಹಾಗೂ ಕಫಿಲ್ ಅಖ್ತರ್‌ಗೆ ಶಿಕ್ಷೆ ವಿಧಿಸಿದೆ. ಈ ಎಲ್ಲ ಮೂವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ , ಅದರಲ್ಲಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಪರಾಧಿಗಳಾದ ಅಝೀಝ್ ಖೊಮೆನಿ ಹಾಗೂ ಕಮಲ್ ಹಸನ್‌ಗೆ ತಲಾ 7.5 ಲಕ್ಷ ರೂ. ದಂಡ ಹಾಗೂ ಇನ್ನೊಬ್ಬ ಅಪರಾಧಿ ಕಫಿಲ್ ಅಖ್ತರ್‌ಗೆ 10 ಲಕ್ಷ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ ಮತ್ತೊಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಪೀಠವು ತಮ್ಮ ತೀರ್ಪಿನಲ್ಲಿ ಆದೇಶಿಸಿದೆ.

ನ್ಯಾಯಾಧೀಶ ಸಿದ್ದಲಿಂಗಪ್ರಭು ಪ್ರಕರಣದ ವಿಚಾರಣೆ ನಡೆಸಿದ್ದರು. ಸರಕಾರದ ಪರ ಪಿ.ರವೀಂದ್ರ ವಾದ ಮಂಡಿಸಿದ್ದರು. ಮೂವರು ಆರೋಪಿಗಳು ತಾವು ತಪ್ಪುಮಾಡಿದ್ದಾಗಿ ಕೋರ್ಟ್ ಮುಂದೆ ಒಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಶಿಕ್ಷೆ ಪ್ರಕಟಿಸಿದ್ದಾರೆ. ಇದೇ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಸೇರಿ 13 ಮಂದಿ ಆರೋಪಿಗಳಿದ್ದರು. ಈಗ ಕೇವಲ ಮೂವರಿಗೆ ಮಾತ್ರ ಎನ್‌ಐಎ ಕೋರ್ಟ್ ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News