ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹಣ ವಾಪಸ್ ಆಗಿಲ್ಲ: ಸಚಿವ ಕೃಷ್ಣಭೈರೇಗೌಡ

Update: 2018-07-09 15:20 GMT

ಬೆಂಗಳೂರು, ಜು. 9- ಪ್ರಧಾನಿ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಂದೇ ಒಂದು ನಯಾಪೈಸೆ ವಾಪಾಸ್ ಆಗಿಲ್ಲ. ಈ ಯೋಜನೆಗೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಂಚಿಕೆಯಾದ ಅನುದಾನವನ್ನು ಸಂಪೂರ್ಣವಾಗಿ ವೆಚ್ಚಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಗೆ ಮೊದಲ ಹಂತದಲ್ಲಿ 16,350 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ 3500 ಕೋಟಿ ರೂ. ವೆಚ್ಚ ಮಾಡಲಾಗಿದೆ. 2ನೆ ಹಂತದಲ್ಲಿ 2100 ಕಿಲೋಮೀಟರ್‌ಗೆ 1019 ಕೋಟಿ ಹಣ ವೆಚ್ಚ ಮಾಡಲಾಗಿದೆ. ಈ ಯೋಜನೆಗೆ ಕೇಂದ್ರದಿಂದ ಶೇ. 60, ರಾಜ್ಯದಿಂದ ಶೇ. 40 ಅನುದಾನ ಹಂಚಿಕೆಯಾಗಿರುತ್ತದೆ. ಕೇಂದ್ರ ಸರಕಾರದಿಂದ ಅನುದಾನ ಬಿಡುಗಡೆ ಮಾಡಿದ ಅನುದಾನದ ಅನುಪಾತದಲ್ಲಿ ರಾಜ್ಯದಿಂದಲ್ಲೂ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಿದರು.

ರಾಜ್ಯ ಸರಕಾರ ಈ ಯೋಜನೆಯಡಿ ರಸ್ತೆ ಅಭಿವೃದ್ದಿಗೆ ಬಜೆಟ್‌ನಲ್ಲಿ ಹಣವನ್ನು ಹಂಚಿಕೆ ಮಾಡಿರುತ್ತದೆ. ಆದರೆ ಕೇಂದ್ರದಿಂದ ಎಷ್ಟು ಹಣ ಬಿಡುಗಡೆಯಾಗುತ್ತದೆ ಎಂಬುದರ ಮೇಲೆ ರಾಜ್ಯದಿಂದಲೂ ಹಣ ಬಿಡುಗಡೆ ಮಾಡುವುದು ನಿಯಮ ಎಂದರು.

ಕಳೆದ 2-3 ವರ್ಷಗಳಿಂದ ರಾಜ್ಯಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಆದರೂ ರಸ್ತೆ ನಿರ್ಮಾಣದಲ್ಲಿ ರಾಜ್ಯ ಸರಕಾರ ಮುಂದಿದೆ. ಈ ಬಾರಿ ಬಜೆಟ್‌ನಲ್ಲಿ 250 ಕೋಟಿ ರೂ. ಅನುದಾನ ಒದಗಿಸಿದ್ದು, ಕೇಂದ್ರದ ಹಣವನ್ನು ನಿರೀಕ್ಷೆ ಮಾಡಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಈ ಯೋಜನೆಯಡಿ ನಿರ್ಮಿಸಲಾದ ರಸ್ತೆಗಳ ನಿರ್ವಹಣೆ ಸರಿಯಿಲ್ಲ ಎಂಬ ಬಿಜೆಪಿಯ ರವಿಕುಮಾರ್ ಆರೋಪವನ್ನು ತಳ್ಳಿಹಾಕಿದ ಸಚಿವರು ಕರ್ನಾಟಕ ರಾಜ್ಯ ಸರಕಾರ ಈ ಯೋಜನೆಯಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News