ಅನ್ನಭಾಗ್ಯ ಅಕ್ಕಿ ಕಡಿತದಿಂದಾಗಿ ಮೂಡಿಗೆರೆ ಶಾಸಕನನ್ನು ಪ್ರಶ್ನಿಸುತ್ತಿರುವ ಮಹಿಳೆಯರು: ಜಗದೀಶ್ ಶೆಟ್ಟರ್
ಬೆಂಗಳೂರು, ಜು.9: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಇಳಿಕೆ ಮಾಡಿರುವುದರಿಂದ, ನಮ್ಮ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿಯನ್ನು ಅವರ ಭಾಗದ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್ ಕಿಚಾಯಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಅವರು, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದ್ದು ಸರಿಯಲ್ಲ ಎಂದು ನಮ್ಮ ಶಾಸಕ ಕುಮಾರಸ್ವಾಮಿಯನ್ನು ಮಹಿಳೆಯರು ಜಾಡಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಬಿ.ಸಿ.ಪಾಟೀಲ್, ಕುಮಾರಸ್ವಾಮಿ ಯಾರು ಎಂದು ಹೆಣ್ಣು ಮಕ್ಕಳಿಗೆ ಗೊತ್ತಿಲ್ಲವೇ? ನೀವು ಹೀಗೆ ಹೇಳುವ ಮೂಲಕ ರಾಜ್ಯದ ಅಮಾಯಕ ಹೆಣ್ಣುಮಕ್ಕಳಿಗೆ ಅಪಮಾನ ಮಾಡಿದ್ದೀರಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯೆ ಕೆ.ಪೂರ್ಣಿಮಾ, ಮಹಿಳೆಯರು ಅಮಾಯಕರಲ್ಲ. ಅವರು ಮುಗ್ಧರು. ಗಂಡ, ಮಕ್ಕಳು, ಕುಟುಂಬ ಇದರಲ್ಲೆ ತಲ್ಲೀನರಾಗಿರುತ್ತಾರೆ. ಆದುದರಿಂದ, ಸ್ವಲ್ಪ ಮಟ್ಟಿಗೆ ಕನ್ಫೂಸ್(ಗೊಂದಲ) ಆಗಿರುತ್ತಾರೆ ಎಂದರು. ಇದಕ್ಕೆ ದನಿಗೂಡಿಸಿದ ಸ್ಪೀಕರ್ ರಮೇಶ್ ಕುಮಾರ್, ಒಮ್ಮೆಮ್ಮೆ ನೀವು ಕನ್ಫೂಸ್ ಆಗ್ತೀರಿ, ಗಂಡಂದಿರನ್ನೂ ಕನ್ಫೂಸ್ ಮಾಡುತ್ತೀರಾ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಜೆಡಿಎಸ್ ಸದಸ್ಯ ಅನ್ನದಾನಿ ಮಾತನಾಡಿ, ಒಂದನೇ ತರಗತಿ ಮಕ್ಕಳಿಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾರು ಅಂತಾ ಗೊತ್ತು ಎಂದರು. ಈ ಸಂದರ್ಭದಲ್ಲಿ ಮತ್ತೆ ಮಧ್ಯಪ್ರವೇಶಿಸಿದ ಪೂರ್ಣಿಮಾ, ಬಹುಶಃ ಬಣ್ಣದ ಕಾರಣಕ್ಕೆ ಗೊಂದಲ ಆಗಿರಬಹುದು ಎಂದರು.