ಹಜ್‌ ಯಾತ್ರೆ-2018: ವಿಮಾನ ನಿಲ್ದಾಣ, ಪೊಲೀಸ್, ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸಭೆ

Update: 2018-07-09 15:36 GMT

ಬೆಂಗಳೂರು, ಜು.9: ಪ್ರಸಕ್ತ ಸಾಲಿನ ಪವಿತ್ರ ಹಜ್‌ ಯಾತ್ರೆಗೆ ಸಂಬಂಧಿಸಿದಂತೆ ಬೆಂಗಳೂರು ವಿಮಾನ ನಿಲ್ದಾಣ, ಕಸ್ಟಮ್ಸ್, ಪೊಲೀಸ್, ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳೊಂದಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೋಷನ್‌ ಬೇಗ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸೋಮವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್‌ ಭವನದಲ್ಲಿ ನಡೆದ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಝಮೀರ್‌ ಅಹ್ಮದ್ ಖಾನ್, ರಾಜ್ಯದ ಹಜ್‌ ಯಾತ್ರಿಗಳ ಸೇವೆ ಮಾಡುವ ಸೌಭಾಗ್ಯ ತಾನಾಗಿ ಒದಗಿ ಬಂದಿದೆ ಎಂದರು.

ಹಜ್‌ ಯಾತ್ರಿಗಳ ಸೇವೆಯಲ್ಲಿ ಅಪಾರ ಅನುಭವ ಹೊಂದಿರುವ ರೋಷನ್‌ ಬೇಗ್, ರಾಜ್ಯ ಹಜ್ ಸಮಿತಿಯ ಅಧ್ಯಕ್ಷರಾಗಿರುವುದು ನನಗೆ ಲಾಭದಾಯಕ. ಅವರ ಹಿರಿತನ, ಸೇವಾ ಅನುಭವವು ಯಾತ್ರಿಗಳಿಗೆ ಸೌಲಭ್ಯ ಒದಗಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ನನ್ನ ಹಾಗೂ ರೋಷನ್‌ ಬೇಗ್ ನಡುವೆ ಯಾವುದೆ ಮನಸ್ತಾಪವಿಲ್ಲ. ಅವರು ನಮ್ಮ ಸಮುದಾಯದ ಹಿರಿಯ ನಾಯಕ. ಈ ಹಿಂದೆ ನಾವು ಬೇರೆ ಬೇರೆ ಪಕ್ಷಗಳಲ್ಲಿ ಇದ್ದೆವು. ಆದರೆ, ಈಗ ನಾವಿಬ್ಬರೂ ಒಂದೇ ಪಕ್ಷದಲ್ಲಿರುವುದರಿಂದ ಅವರ ನಾಯಕತ್ವದಲ್ಲಿ ನಾವು ಮುಂದುವರೆಯುತ್ತೇವೆ. ನಾನು ಸಚಿವ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ದೇವರ ಅನುಗ್ರಹದಿಂದ ಸಮುದಾಯ ಹಾಗೂ ರಾಜ್ಯದ ಜನತೆಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಅವರು ತಿಳಿಸಿದರು.

ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರೋಷನ್‌ ಬೇಗ್ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಝಮೀರ್‌ ಅಹ್ಮದ್‌ ಖಾನ್ ಅವರನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಇಂದಿನ ಸಭೆಯಲ್ಲಿ ಹಜ್ ಕ್ಯಾಂಪ್‌ನ ಸಿದ್ಧತೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಿದ್ದೇವೆ ಎಂದರು.

ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಎಮಿಗ್ರೇಷನ್ ಚಟುವಟಿಕೆಯನ್ನು ವಿಮಾನ ನಿಲ್ದಾಣದಲ್ಲೆ ಮಾಡಲಾಗುವುದು. ಪ್ರತಿ 20 ಸೆಕೆಂಡಿಗೆ ಒಬ್ಬರ ಎಮಿಗ್ರೇಷನ್ ಆಗುತ್ತದೆ. ಆದುದರಿಂದ, ಯಾತ್ರಿಗಳಿಗೆ ಯಾವುದೆ ತೊಂದರೆಯಾಗುವುದಿಲ್ಲ. ಅಲ್ಲದೆ, ವಿಮಾನ ನಿಲ್ದಾಣದ ಅಧಿಕಾರಿಗಳು ಎಮಿಗ್ರೇಷನ್‌ಗಾಗಿ ಹೆಚ್ಚಿನ ಕೌಂಟರ್‌ಗಳನ್ನು ತೆರೆಯುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಜಿದ್ದಾ ಮೂಲದ ಮೆಡ್ ಎಕ್ಸ್‌ಪರ್ಟ್ಸ್ ಟೆಲಿಮೆಡಿಸನ್ ನಿರ್ದೇಶಕ ಡಾ.ರಿಝ್ವಾನ್ ಅಹ್ಮದ್ ಮಾತನಾಡಿ, ಹಜ್‌ ಯಾತ್ರೆಗೆ ತೆರಳುವ 1.25 ಲಕ್ಷ ಯಾತ್ರಿಗಳಿಗೆ ಆರೋಗ್ಯ ಸೇವೆ ಒದಗಿಸಲು ಭಾರತ ಸರಕಾರವು 220 ವೈದ್ಯರನ್ನು ಕಳುಹಿಸುತ್ತದೆ. ಆದರೆ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿರುವ ಯಾತ್ರಿಗಳಿಗೆ ಕೇವಲ 220 ವೈದ್ಯರು ಸಾಕಾಗುವುದಿಲ್ಲ ಎಂದರು. ಆದುದರಿಂದ, ನಮ್ಮ ಸಂಸ್ಥೆಯು ಕೆಲವು ಅಗತ್ಯ ಔಷಧಿಗಳನ್ನು ಒಳಗೊಂಡ ವೈದ್ಯಕೀಯ ಕಿಟ್ ಅನ್ನು ರಾಜ್ಯದ ಯಾತ್ರಿಗಳಿಗೆ ಉಚಿತವಾಗಿ ನೀಡಲು ಉದ್ದೇಶಿಸಿದೆ. ಈ ಕಿಟ್‌ನಲ್ಲಿರುವ ಔಷಧಿಗಳನ್ನು ಹೊರಗಡೆಯಿಂದ ಖರೀದಿಸಿದರೆ 220 ರೂ.ಗಳಾಗುತ್ತದೆ. ಆದರೆ, ನಮ್ಮ ಸಂಸ್ಥೆಯು ಔಷಧಿ ಸಿದ್ಧಪಡಿಸುವ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಕೇವಲ 42 ರೂ.ಗಳಿಗೆ ಇದನ್ನು ಪಡೆಯಲಿದೆ ಎಂದು ಅವರು ಹೇಳಿದರು.

ನಮ್ಮ ವೈದ್ಯಕೀಯ ಸೇವೆಯನ್ನು ಮೊಬೈಲ್ ಆ್ಯಪ್ ಮೂಲಕ ಒದಗಿಸಲಾಗುವುದು. ಆರೋಗ್ಯ ಸಮಸ್ಯೆ ಕಂಡು ಬಂದರೆ ರೋಗಿಗಳು ವೈದ್ಯರೊಂದಿಗೆ ವಿಡಿಯೋ ಕಾಲ್ ಮೂಲಕ ಚರ್ಚಿಸಬಹುದು. ಇಲ್ಲವೆ, ಉಚಿತ ಸಹಾಯವಾಣಿಗೆ ಕರೆ ಮಾಡಿಯೂ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಕಿಟ್‌ನಲ್ಲಿ ಇರಿಸಲಾಗಿರುವ ಔಷಧಿಗಳನ್ನು ಯಾವುದಕ್ಕಾಗಿ ಬಳಸಬೇಕು ಎಂಬ ಸೂಚನಾ ಪತ್ರವನ್ನು ಕೊಡಲಾಗುವುದು ಎಂದು ರಿಝ್ವಾನ್ ಹೇಳಿದರು.

ಸಭೆಯಲ್ಲಿ ರಾಜ್ಯ ಹಜ್ ಸಮಿತಿಯ ಸದಸ್ಯ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ ಖಾನ್ ಸೇರಿದಂತೆ ಹಜ್ ಸಮಿತಿಯ ಎಲ್ಲ ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News