ಅಧಿಕಾರಕ್ಕೆ ಬರಲ್ಲವೆಂದು ಜನತೆಗೆ ಸುಳ್ಳು ಭರವಸೆ ನೀಡಿದ ಜೆಡಿಎಸ್: ಯಡಿಯೂರಪ್ಪ ವಾಗ್ದಾಳಿ

Update: 2018-07-09 15:41 GMT

ಬೆಂಗಳೂರು, ಜು.9: ನಿಮಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬರಲ್ಲ ಎಂದು ನಿಮಗೆ ಗೊತ್ತಿತ್ತು. ಆದುದರಿಂದಲೆ, ಚುನಾವಣಾ ಪ್ರಣಾಳಿಕೆಯಲ್ಲಿ ರೈತರ 53 ಸಾವಿರ ಕೋಟಿ ರೂ.ಸಾಲ ಮನ್ನಾ ಸೇರಿದಂತೆ ಇನ್ನಿತರ ಸುಳ್ಳು ಭರವಸೆಗಳನ್ನು ನೀಡಿ, ಹಿಂಬಾಗಿಲ ಮೂಲಕ ಅಧಿಕಾರ ಹಿಡಿದಿದ್ದೀರ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೇಕಾರರು, ಸ್ತ್ರಿಶಕ್ತಿ ಸಂಘಗಳ ಸಾಲ ಮನ್ನಾ, ಗರ್ಭಿಣಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂ., ಹಿರಿಯ ನಾಗರಿಕರಿಗೆ 6 ಸಾವಿರ ರೂ.ಮಾಸಾಶನ, ಒಂದು ಕೋಟಿ ಉದ್ಯೋಗ ಸೃಷ್ಟಿ ಸೇರಿದಂತೆ ಅನೇಕ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ನಮಗೆ ಸ್ಪಷ್ಟ ಬಹುಮತ ನೀಡಿ ಎಂದು ನಾವು ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ಕೊಟ್ಟಿದ್ದು ನಿಜ. ಆದರೆ, ನಮಗೆ ಅದ್ಯಾವುದು ಬೇಡ ಎಂದು ಜನ ನಮಗೆ ಮತ ಹಾಕಿಲ್ಲ. ಆದರೂ, ಮಾನವೀಯತೆ ದೃಷ್ಟಿಯಿಂದ ಈ ಭರವಸೆಗಳನ್ನು ಈಡೇರಿಸುತ್ತಿದ್ದೇವೆ ಎಂದರು.

ನಂತರ ತಮ್ಮ ಮಾತು ಮುಂದುವರೆಸಿದ ಯಡಿಯೂರಪ್ಪ, ಇದು ಎರಡು ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುವ ಈ ಬಜೆಟ್‌ನಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿ ಕಾಣುತ್ತಿಲ್ಲ. ಸಾಂದರ್ಭಿಕ ಶಿಶುಗೆ ಜನಿಸಿದ ಈ ಬಜೆಟ್ ‘ಅನಾಥ ಶಿಶು’. ಬಂಡವಾಳವಿಲ್ಲದ ಬಡಾಯಿ. ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸುವ ಪಿತೂರಿಯನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠವನ್ನು ಕಲಿಸುತ್ತಾರೆ. ಕೊಟ್ಟ ಮಾತಿನಂತೆ ನಡೆಯುವುದು ನಾಯಕನಾದವನ ಧರ್ಮ. ಮಾತು ಕೊಟ್ಟೂ ಮಾತು ತಪ್ಪುವುದು ಖಳನಾಯಕನ ಲಕ್ಷಣ. ನಿಮ್ಮ ವಚನ ಭ್ರಷ್ಟತೆ, ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವ ನಡೆಯು ಎಲ್ಲರಿಗೂ ಗೊತ್ತಿದೆ ಎಂದು ಅವರು ಟೀಕಿಸಿದರು.

ರೈತರ ಅಲ್ಪಾವಧಿ ಸಾಲ ಇರುವುದು 1.95 ಲಕ್ಷ ಕೋಟಿ ರೂ. ಯಾವ ಆಧಾರದ ಮೇಲೆ 53 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೀರಾ. ರಾಜ್ಯದಲ್ಲಿ ಸುಸ್ತಿದಾರರು ಇರೋದೆ ಬಹಳ ಕಡಿಮೆ ಸಂಖ್ಯೆಯಲ್ಲಿ. ಸಹಕಾರ ಸಂಘಗಳಲ್ಲಿ ಸುಸ್ತಿ ಸಾಲ ಇರುವುದು 561 ಕೋಟಿ ರೂ. ಹಾಗೂ ಚಾಲ್ತಿ ಸಾಲ 10,734 ಕೋಟಿ ರೂ. ಹಾಗಾಗಿ ಚಾಲ್ತಿ ಸಾಲ ಮನ್ನಾ ಮಾಡಿದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ಸಾಲ ಮರುಪಾವತಿ ಮಾಡಿದವರಿಗೆ 25 ಸಾವಿರ ರೂ.ಪ್ರೋತ್ಸಾಹ ಧನ ಸರಕಾರ ಕೊಡುವುದಾಗಿ ಹೇಳಿದ್ದೀರಿ. 2 ಲಕ್ಷ ರೂ.ಸಾಲ ಮರುಪಾವತಿ ಮಾಡಿದ ರೈತರ ಪ್ರಾಮಾಣಿಕತೆಗೆ ಕೇವಲ 25 ಸಾವಿರ ರೂ. ಬೆಲೆ ಕಟ್ಟಲಾಗುತ್ತಿದೆ. ಅಲ್ಲದೆ, ಹಿಂದಿನ ಸರಕಾರದಲ್ಲಿ 50 ಸಾವಿರ ರೂ.ವರೆಗಿನ ಸಾಲ ಮನ್ನಾದ ಪ್ರಯೋಜನ ಪಡೆದವರಿಗೆ ಇದರಿಂದ ಯಾವುದೆ ಉಪಯೋಗವಾಗುವುದಿಲ್ಲ ಎಂದು ಅವರು ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ ಪ್ರಮಾಣ ಕಡಿತ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಕೇವಲ 17.10 ಲಕ್ಷ ರೈತರಿಗೆ ಮಾತ್ರ ಈ ಸಾಲ ಮನ್ನಾ ಯೋಜನೆಯಿಂದ ಪ್ರಯೋಜನವಾಗುತ್ತದೆ. ಇದು ಒಟ್ಟಾರೆ ರೈತರ ಶೇ.32.50ರಷ್ಟು ಮಾತ್ರ. 34 ಸಾವಿರ ಕೋಟಿ ರೂ.ಗಳನ್ನು ಯಾವ ರೀತಿಯಲ್ಲಿ ಒದಗಿಸುತ್ತೀರಾ ಎಂಬುದು ಸ್ಪಷ್ಟಪಡಿಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.

ಪೆಟ್ರೋಲ್, ಡಿಸೇಲ್, ವಿದ್ಯುತ್, ಮದ್ಯದ ಮೇಲಿನ ದರವನ್ನು ಹೆಚ್ಚಳ ಮಾಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಹಾಗಾದರೆ, ಇದರಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟು ಆದಾಯ ಬರುತ್ತದೆ. 28 ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿರುವುದೇಕೇ? ಇದಕ್ಕೆಲ್ಲ ಮುಖ್ಯಮಂತ್ರಿ ತಮ್ಮ ಉತ್ತರದಲ್ಲಿ ತಿಳಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News