ರಾಹುಲ್ ಗಾಂಧಿಗೆ ಮೂವರೂ ಧನ್ಯವಾದ ಹೇಳೋಣ: ಸ್ಪೀಕರ್ ರಮೇಶ್ ಕುಮಾರ್

Update: 2018-07-09 15:46 GMT

ಬೆಂಗಳೂರು, ಜು. 9: ‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಯಿಂದ ಜೆಡಿಎಸ್-ಬಿಜೆಪಿ ಇಬ್ಬರಿಗೂ ಲಾಭವಾಗಿದೆ. ಹೀಗಾಗಿ ನೀವೂ ಅವರಿಗೆ ಧನ್ಯವಾದ ಹೇಳಿ, ನಾವೂ ಅವರಿಗೆ ಧನ್ಯವಾದ ಹೇಳುತ್ತೇವೆ’ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆಯಲ್ಲಿ ಬಿಎಸ್‌ವೈ ಮತ್ತು ಎಚ್‌ಡಿಕೆ ಮಧ್ಯ ವಾಕ್ಸಮರ ನಡೆಯುತ್ತಿತ್ತು. ಈ ವೇಳೆ ಎದ್ದುನಿಂತ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್, ಬಿಜೆಪಿ ‘ಬಿ’ ಟೀಮ್ ಎಂದು ಹೇಳಿದ ಕಾರಣಕ್ಕೆ ಬಿಜೆಪಿಗೆ 104 ಸ್ಥಾನಗಳು ಸಿಕ್ಕಿವೆ. ನಮಗೆ 37 ಸ್ಥಾನಗಳು ಬಂದಿವೆ. ಹೀಗಾಗಿ ನೀವು ರಾಹುಲ್ ಗಾಂಧಿಗೆ ಧನ್ಯವಾದ ಹೇಳಬೇಕು ಎಂದರು.

ರಾಹುಲ್ ಆ ಹೇಳಿಕೆ ನೀಡದಿದ್ದರೆ ಜೆಡಿಎಸ್‌ಗೆ 70 ಸ್ಥಾನಗಳು ಬರುತ್ತಿದ್ದವು. ಆಗ ಬಿಜೆಪಿ 70 ಸ್ಥಾನ ದಾಟುತ್ತಿರಲಿಲ್ಲ ಎಂದ ಅವರು, ಈ ಹಿಂದೆ ಜೆಡಿಎಸ್-ಬಿಜೆಪಿ ಸರಕಾರ ರಚನೆ ವೇಳೆ ನಾನು ಸಾಕ್ಷಿಯಾಗಿದ್ದೇನೆ. ಕುಮಾರಸ್ವಾಮಿ ಯಾವುದೇ ತಪ್ಪು ಮಾತು ಆಡಿಲ್ಲ ಎಂದರು.

ಆಗ ಮಧ್ಯಪ್ರವೇಶಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ರಾಹುಲ್ ಗಾಂಧಿ ಅವರ ಹೇಳಿಕೆ ಸತ್ಯವೋ ಸುಳ್ಳೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಕಾಲೆಳೆದರು. ರೇವಣ್ಣ ಮಾತು ಆರಂಭಿಸುವ ಮುನ್ನವೇ ಸತ್ಯ ಹೇಳುತ್ತೇನೆ ಎಂದಿದ್ದಾರೆ. ಹೀಗಾಗಿ ಅವರು ಹೇಳಿರುವುದೆಲ್ಲ ಸತ್ಯ ಎಂದು ಬಿಜೆಪಿಯ ಅರವಿಂದ ಲಿಂಬಾವಳಿ ಮಸಾಲೆ ಬೆರೆಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ರಮೇಶ್‌ ಕುಮಾರ್, ನಿಮಗಿಬ್ಬರಿಗೂ ಲಾಭವಾಗಿದೆ. ನೀವು ಅವರಿಗೆ ಥ್ಯಾಂಕ್ಸ್ ಹೇಳಿ, ನಾವು ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಚರ್ಚೆಗೆ ತೆರೆ ಎಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News