ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಖಾಯಂ ಮಾಡಲು ಅವಕಾಶವಿಲ್ಲ: ಕೃಷ್ಣ ಭೈರೇಗೌಡ

Update: 2018-07-09 15:54 GMT

ಬೆಂಗಳೂರು, ಜು. 9: ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು(ಬಿಆರ್‌ಸಿ) ಮತ್ತು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳನ್ನು(ಸಿಆರ್‌ಸಿ) ಮಾನವೀಯತೆ ಆಧಾರದ ಮೇಲೆ ಮುಂದುವರೆಸಲಾಗಿದೆ. ಅವರನ್ನು ಖಾಯಂ ಮಾಡಲು ಕಾನೂನಿನಡಿ ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 2011ರಲ್ಲಿ 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ 291 ಮಂದಿಯನ್ನು ನೇಮಕ ಮಾಡಲಾಗಿತ್ತು. ಅವರ ಅವಧಿ ಮುಗಿದ ಬಳಿಕವೂ ಮಾನವೀಯ ನೆಲೆಯಲ್ಲಿ ಮುಂದುವರೆಸಲಾಗಿದೆ ಎಂದು ಹೇಳಿದರು.

ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದರಿಂದ ಖಾಯಂ ಮಾಡಲು ಬರುವುದಿಲ್ಲ. ಆದರೆ ಬಿಆರ್‌ಸಿ ಮತ್ತು ಸಿಆರ್‌ಸಿ ವೇತನ ಪರಿಷ್ಕರಣೆ ಮಾಡಲಾಗುವುದು. ಅಲ್ಲದೆ ನೇರವಾಗಿ ಅವರ ಖಾತೆಗೆ ಹಣ ಜಮೆ ಮಾಡುವ ಸಂಬಂಧ ಆ ಅಧಿಕಾರಿಗಳೊಂದಿಗೆ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ನ್ಯಾಯಾಲಯವೇ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಖುದ್ದು ನಿರ್ದೇಶನ ನೀಡಿ ಅಗತ್ಯವಿರುವ ಕಡೆ ಈ ಸೇವೆಯನ್ನು ಬಳಸಿಕೊಳ್ಳಬಹುದು ಎಂದಿದೆ. ಹೀಗಾಗಿ ಕೆಲವೆಡೆ ಮುಂದುವರೆದಿದ್ದಾರೆ. ಕೆಲವೆಡೆ ಕಾರ್ಯನಿರ್ವಹಿಸುತ್ತಿಲ್ಲ. ಯಾರಿಗಾದರೂ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಲ್ಲದೆ, ಕೃಷ್ಣ ಭೈರೇಗೌಡ ಸದಸ್ಯರ ಸಭೆ ಕರೆಯುತ್ತೇನೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ವಿಷಯ ಎಲ್ಲ ಸದಸ್ಯರಿಗೆ ಗೊತ್ತಾಗಲಿ ಎಂದು ನ್ಯಾಯಾಲಯದ ಆದೇಶದ ಪ್ರತಿಯನ್ನು ಮುಂದಿಟ್ಟುಕೊಂಡು ಉತ್ತರ ನೀಡಿ, ಬಿಆರ್‌ಸಿ-ಸಿಆರ್‌ಸಿಗಳನ್ನು ಖಾಯಂ ಮಾಡಲು ಬರುವುದಿಲ್ಲ. ವೇತನ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News