ಸರಗಳ್ಳತನ ಪ್ರಕರಣ: ಇಬ್ಬರ ಬಂಧನ

Update: 2018-07-09 16:10 GMT

ಬೆಂಗಳೂರು, ಜು.9: ಸರಗಳ್ಳತನ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 20 ಲಕ್ಷ ಮೌಲ್ಯದ 900 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್, ಲಿಂಗಾರಾಜಪುರದ ನವೀನ್ ಶೆಟ್ಟಿ (19) ಹಾಗೂ ಕನಕದಾಸ ಲೇಔಟ್‌ನ ಬಾಲಕುಮಾರ್(19) ಬಂಧಿತರ ಎಂದು ಮಾಹಿತಿ ನೀಡಿದರು.

ಇವರಿಬ್ಬರಿಗೆ ಸರಗಳ್ಳತನ, ಮೊಬೈಲ್ ಕಳ್ಳತನದ ಅಣಕು ಪ್ರದರ್ಶನ ತೋರಿಸಿ ತರಬೇತಿ ನೀಡಿದ ಲಿಂಗಾರಾಜಪುರ ಸಗಾಯನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳು 8 ತಿಂಗಳಿಂದ ಜಯನಗರ, ಬನಶಂಕರಿಯಲ್ಲಿ ತಲಾ ಮೂರು, ಸಿದ್ದಾಪುರ, ಕೋಣನಕುಂಟೆ, ಸಿ.ಕೆ.ಅಚ್ಚುಕಟ್ಟು, ತಿಲಕ್‌ನಗರದ ತಲಾ 2, ಮಲ್ಲೇಶ್ವರ 4, ಗಿರಿನಗರ, ಹನುಮಂತನಗರ, ಬಸವನಗುಡಿ, ಜೆಪಿ ನಗರ ತಲಾ 1 ಸೇರಿದಂತೆ 22 ಸರಗಳ್ಳತನ ಮಾಡಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಅಣಕು ತರಬೇತಿ: ಸಗಾಯ್ ನಿಮಗೆ ಸುಲಭವಾಗಿ ಹಣ ಸಂಪಾದಿಸುವ ಮಾರ್ಗವನ್ನು ಹೇಳಿಕೊಡುತ್ತೇನೆ ಎಂದು ಲಿಂಗರಾಜಪುರದ ಚಾಲ್ಸ್ ಆಟದ ಮೈದಾನಕ್ಕೆ ಕರೆದೊಯ್ದು ಬೈಕ್‌ನಲ್ಲಿ ಸರ ಕಸಿಯುವ ಅಣಕು ಪ್ರದರ್ಶನ ತೋರಿಸಿ ಹೇಳಿಕೊಟ್ಟಿದ್ದನಲ್ಲದೇ, ಮೊಬೈಲ್, ಪರ್ಸ್ ದೋಚುವ ಬಗ್ಗೆಯು ತರಬೇತಿ ನೀಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸಿಕ್ಕಿದ್ದು ಹೇಗೆ: ಜಯನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಎಸಿಪಿ ಶ್ರೀನಿವಾಸ್ ಅವರ ನೇತೃತ್ವದ ವಿಶೇಷ ತಂಡ ಸರ ಕಳವು ಕೃತ್ಯ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾದ ಕೃತ್ಯವನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳು ಹಸಿರು ಹಾಗೂ ಕಪ್ಪು ಬಣ್ಣ ಜಾಕೆಟ್ ಧರಿಸಿ ಸರಗಳ್ಳತನ ನಡೆಸಿರುವುದು ಪತ್ತೆಯಾಯಿತು.

ಅದರ ಜಾಡು ಹಿಡಿದು ಕಳೆದ ಮೂರು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅವರು ನವೀನ್ ಶೆಟ್ಟಿ ಹಾಗೂ ಬಾಲಕುಮಾರ್ ಎಂದು ಪತ್ತೆಯಾಗಿ ಅವರ 8 ತಿಂಗಳ ಸರಗಳ್ಳತನ ಕೃತ್ಯಗಳು ಬೆಳಕಿಗೆ ಬಂದವು ಎಂದು ಡಿಸಿಪಿ ಡಾ.ಶರಣಪ್ಪ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News