ಬಜೆಟ್ ಅಸ್ತಿತ್ವದ ಕುರಿತು ಸದನದಲ್ಲಿ ಚರ್ಚೆ
ಬೆಂಗಳೂರು, ಜು.9: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನ ಅಸ್ತಿತ್ವದ ಕುರಿತು ಸೋಮವಾರ ವಿಧಾನಸಭೆಯಲ್ಲಿ ಕೆಲಕಾಲ ಚರ್ಚೆ ನಡೆಯಿತು. ಭೋಜನ ವಿರಾಮದ ನಂತರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಬಜೆಟ್ ಮೇಲಿನ ಚರ್ಚೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟರು.
ಬಿಜೆಪಿ ಸದಸ್ಯ ಮಾಧುಸ್ವಾಮಿ ಮಾತನಾಡಿ, ನಾನು ಪ್ರಶ್ನಾವಳಿಗೆ ಅವಕಾಶ ಕೇಳುತ್ತಿದ್ದೇನೆ. ಒಂದು ಬಜೆಟ್ ಮಂಡನೆ ಆಗಿರುವಾಗ ಮತ್ತೊಂದು ಬಜೆಟ್ ಮಂಡನೆ ಸಾಧ್ಯವಾ? ಹೊಸ ಬಜೆಟ್ ಮಂಡನೆಯಾದ್ರೆ ಹಳೆಯ ಬಜೆಟ್ ಕಥೆ ಏನು? ರಾಜ್ಯಪಾಲರು ಹೇಗೆ ಇದಕ್ಕೆ ಒಪ್ಪಿಗೆ ಸೂಚಿಸಿದರು. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ರದ್ದಾಗಿದೆಯಾ? ನಾನು ಒಬ್ಬ ವಿದ್ಯಾರ್ಥಿಯಾಗಿ ಕೇಳುತ್ತಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಈಗ ಕುಮಾರಸ್ವಾಮಿ ಕೂಡ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಸಿದ್ದರಾಮಯ್ಯ ಬಜೆಟ್‌ನ ಎಲ್ಲ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಮುಂದುವರೆಸುವುದಾಗಿ ಮಾತ್ರ ಉಲ್ಲೇಖಿಸಿದ್ದಾರೆ ಎಂದು ಅವರು ಹೇಳಿದರು. ಆದರೆ, ಸಿದ್ದರಾಮಯ್ಯ ಬಜೆಟ್‌ನಲ್ಲಿ ಉಲ್ಲೇಖಿಸಿದ್ದ ಅಂದಾಜುಗಳು ಮತ್ತು ಆರ್ಥಿಕ ಸ್ಥಿತಿಗತಿಯ ಗತಿ ಏನು? ಇದು ಗೊಂದಲಕ್ಕೆ ಕಾರಣವಾಗಿದೆ. ಈ ಬಜೆಟ್ ಲೇಖಾನುದಾನಕ್ಕೆ ಒಪ್ಪಿಗೆ ತೆಗೆದುಕೊಳ್ಳುವ ಮೊದಲು ಅಂದಾಜುಗಳ ಮೌಲ್ಯ ಹಾಗೂ ಅಗತ್ಯತೆಯ ವಿವರಣೆ ಏಕೆ ನೀಡಿಲ್ಲ ಎಂದು ಅವರು ಕೇಳಿದರು.
ಈ ಬಜೆಟ್ ಸಂವಿಧಾನ ಪ್ರಕಾರ ಸಿಂಧುನಾ? ಈ ಹಿಂದೆ ಸಿದ್ದರಾಮಯ್ಯ ಮಂಡಿಸಿರುವ ಪೂರ್ಣಪ್ರಮಾಣದ ಬಜೆಟ್ ಇನ್ನೂ ಜೀವಂತದಲ್ಲಿದೆ. ಒಂದು ಬಜೆಟ್ ಜೀವಂತ ಇರುವಾಗ ಕುಮಾರಸ್ವಾಮಿ ಮತ್ತೊಂದು ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಯಾವ ಬಜೆಟ್ ಅನ್ನು ಪರಿಗಣಿಸಬೇಕು. ರಾಜ್ಯದಲ್ಲಿ ಮೊದಲ ಬಾರಿಗೆ ಚರ್ಚೆ ಆಗದೆ ಬಜೆಟ್ ಅಂಗೀಕಾರ ಆಗಬಾರದು. ಈ ಬಗ್ಗೆ ಸ್ಪಷ್ಟಣೆ ನೀಡಬೇಕು ಎಂದು ಮಾಧುಸ್ವಾಮಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಲೇಖಾನುದಾನ ತೆಗೆದುಕೊಂಡಿದ್ದರು. ನಾನು ಮುಂದಿನ ಮಾರ್ಚ್ 31ರವರೆಗೆ ಅನ್ವಯವಾಗುವ ಪೂರ್ಣ ಪ್ರಮಾಣ ಬಜೆಟ್ ಮಂಡಿಸಿದ್ದೇನೆ. ಈ ರೀತಿ ಎರಡೆರಡು ಬಜೆಟ್ ಮಂಡನೆ ಮಾಡಿರುವುದು ಹೊಸದೇನಲ್ಲ ಎಂದರು.
ಈ ಹಿಂದೆ ಜಗದೀಶ್ ಶೆಟ್ಟರ್ ಬಜೆಟ್ ಮಂಡನೆ ಮಾಡಿದ್ದ ವರ್ಷದಲ್ಲೆ ಹೊಸ ಸರಕಾರ ಅಧಿಕಾರಕ್ಕೆ ಬಂದ ಕಾರಣ ಸಿದ್ದರಾಮಯ್ಯ ಮತ್ತೆ ಬಜೆಟ್ ಮಂಡಿಸಿದ್ದರು. ನಾವು ಅದೇ ರೀತಿ ಸಂಪ್ರದಾಯ ಪಾಲಿಸಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಗ್ರಾಮಪಂಚಾಯತ್ ಗಳಲ್ಲೂ ವರ್ಷಕ್ಕೆ ಒಮ್ಮೆ ಮಾತ್ರ ಜನರಲ್ ಬಾಡಿ ಮೀಟಿಂಗ್ ಕರೆದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಾರೆ ಎಂದರು.
ನಮ್ಮ ಬಜೆಟ್ ಅನ್ನು ಗ್ರಾಮಪಂಚಾಯತ್ ಗೆ ಹೋಲಿಸಲಾಗುತ್ತಿದೆ. ಮಾತಿನ ಮೇಲೆ ನಿಗಾ ಇರಲಿ ಹಿಡಿತ ಇರಬೇಕು. ಸಿದ್ದರಾಮಯ್ಯ ಲೇಖಾನುದಾನ ಮಾತ್ರ ತೆಗೆದುಕೊಂಡಿದ್ದರು. ಆದರೆ, ನಾನು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನ ಅಂದಾಜುಗಳನ್ನು ಮುಂದುವರಿಸುವ ಅಗತ್ಯವಿಲ್ಲ. ಸಿದ್ದರಾಮಯ್ಯ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ವಿಷಯ ಇರಲಿಲ್ಲ. ನಾವು ಅದನ್ನು ತಂದಿಲ್ಲವೇ. ಹಾಗಾಗಿ ನಮ್ಮ ಬಜೆಟ್ ಸಿದ್ದರಾಮಯ್ಯನವರ ಕಾರ್ಯಕ್ರಮಗಳನ್ನು ಒಳಗೊಂಡ ಹೊಸ ಬಜೆಟ್ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್, ನಾನು ಮಂಡಿಸಿದ ಬಜೆಟ್ ಅನ್ನು ಸಿದ್ದರಾಮಯ್ಯ ಪೂರ್ತಿ ಕೈ ಬಿಟ್ಟು ಹೊಸ ಬಜೆಟ್ ಮಂಡನೆ ಮಾಡಿದ್ದರು. ಆದರೆ ಈಗ ಹಾಗಲ್ಲ. ಮುಖ್ಯಮಂತ್ರಿಯವರ ಬಜೆಟ್ ವಿಷಯದಲ್ಲಿ ಸ್ಪಷ್ಟತೆ ಇಲ್ಲ ಎಂದರು. ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, 12ಕ್ಕೂ ಹೆಚ್ಚು ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಇಂತಹಾ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಎಂದು ಗೊತ್ತಿದ್ದ ಕಾರಣದಿಂದಲೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಅಗತ್ಯವಿಲ್ಲ. ಪೂರಕ ಅಂದಾಜುಗಳ ಮಂಡನೆ ಸಾಕು ಎಂದು ಸಲಹೆ ನೀಡಿದ್ದರು ಎಂದರು.
ಈ ಸಂಬಂಧ ತಜ್ಞರ ಅಭಿಪ್ರಾಯ ಪಡೆದು, ನಂತರ ರೂಲಿಂಗ್ ಕೊಡಲಾಗುತ್ತದೆ. ಹಿಂದಿನ ಸಂಪ್ರದಾಯಗಳನ್ನು ಅನುಸರಿಸಿ ಮುಖ್ಯಮಂತ್ರಿ ಹೊಸ ಬಜೆಟ್ ಮಂಡಿಸಿದ್ದಾರೆ. ಯಾವ ಹಣಕಾಸು ಸಚಿವರೂ ಮೂರು ತಿಂಗಳಿಗಾಗಿ ಬಜೆಟ್ ಮಂಡಿಸುವುದಿಲ್ಲ. ಬಜೆಟ್ ಮಂಡಿಸಿ, ಹಣಕಾಸು ಖರ್ಚಿಗೆ ಲೇಖಾನುದಾನ ಪಡೆಯುತ್ತಾರೆ. ಈ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಪರಿಹಾರ ಏನು ಎಂಬುದನ್ನು ತಜ್ಞರ ಜತೆ ಚರ್ಚಿಸುವುದು ಅಗತ್ಯ ಎಂದು ಸ್ಪೀಕರ್ ಹೇಳಿದರು.