ಬೆಂಗಳೂರು: ನೌಕರರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಜು. 9: ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ನೌಕರರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ಸಿಬ್ಬಂದಿ ಇಂದಿಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ನೂರಾರು ಸಿಬ್ಬಂದಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಹಾಗೂ ಆರ್‌ಆರ್ ಎಂಸಿಎಚ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಕೋರಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಸಿ.ಎಸ್.ರಘು, 350ಕ್ಕೂ ಅಧಿಕ ಸಂಖ್ಯೆಯಲ್ಲಿರುವ ನೌಕರರ ಮೇಲೆ ಆಡಳಿತ ಮಂಡಳಿ ಮೊದಲಿನಿಂದಲೂ ದೌರ್ಜನ್ಯವನ್ನು ನಡೆಸುತ್ತಿದೆ. 8 ರಿಂದ 10 ವರ್ಷಗಳ ಸೇವೆ ಸಲ್ಲಿಸುತ್ತಿರುವ ನೌಕರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರರ ಸಂಘ ಸ್ಥಾಪಿಸಿದ್ದೇ ತಪ್ಪಾಗಿ, ಸಂಘದ ಮುಖಂಡರುಗಳಿಗೆ ತೀವ್ರ ಕಿರುಕುಳ ನೀಡಲಾರಂಭಿಸಿದ್ದಾರೆ. ಅಲ್ಲದೆ, 6 ನೌಕರರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ಆರೋಪಿಸಿದರು.
ಆಡಳಿತ ಮಂಡಳಿ ಸದಸ್ಯರ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾಗಿ ಪ್ರಥಮ ಮಾಹಿತಿ ವರದಿ ಸಿದ್ಧವಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದೇ ನೌಕರರ ಮುಖಂಡರನ್ನು ಆಡಳಿತ ವರ್ಗವು ಶಿಕ್ಷಿಸಿದೆ. ಈ ಕಾರ್ಮಿಕ ಹಾಗೂ ದಲಿತ ವಿರೋಧಿ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದ ಅವರು, ಆಡಳಿತ ಮಂಡಳಿಯ ಡಾ.ನವೀನ್ ಪ್ರಸನ್ನ ಕುಮಾರ್ ಹಾಗೂ ಜ್ಯೋತಿ ಎಂಬುವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.