ಬೆಂಗಳೂರು: ನೌಕರಿ ಖಾಯಂಗೊಳಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ಜು.9: ಇಂಧನ ಇಲಾಖೆಯಲ್ಲಿನ ಎಲ್ಲಾ ವಿಭಾಗದ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಸೋಮವಾರ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಜಮಾಯಿಸಿದ ಕಾರ್ಮಿಕರು, ಇಂಧನ ಇಲಾಖೆಯಲ್ಲಿ ಗುತ್ತಿಗೆ ಪದ್ಧತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವವರನ್ನು ಖಾಯಂ ಗೊಳಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕರೆದಿರುವ ನೇರ ನೇಮಕವನ್ನು ರದ್ದು ಮಾಡಬೇಕು. ಬಳ್ಳಾರಿ, ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನವಾಗಿ 21 ಸಾವಿರ ರೂ.ಗಳನ್ನು ನೀಡಬೇಕು. ಅಲ್ಲದೆ, ತಮಿಳುನಾಡು, ಆಂಧ್ರ ಸರಕಾರಗಳು ಗುತ್ತಿಗೆ ನೌಕರರನ್ನು ಖಾಯಂ ಮಾಡಿದಂತೆ ಕರ್ನಾಟಕದಲ್ಲೂ ಮಾಡಬೇಕು ಹಾಗೂ ನೇರ ನೇಮಕಾತಿಯಲ್ಲಿ ಸೇವಾ ಹಿರಿತನದ ಆಧಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ 1,501ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ವಿದ್ಯುತ್ ಅವಘಡಗಳಲ್ಲಿ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಸೂಕ್ತ ರೀತಿಯಲ್ಲಿ ಸೌಲಭ್ಯ ಹಾಗೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ವಿದ್ಯುತ್ ಅವಘಡದಿಂದ ಸಾವಿಗೀಡಾದ ಮತ್ತು ಅಂಗವಿಕಲರಾದ ಕಾರ್ಮಿಕರ ಸಂಪೂರ್ಣ ಜವಾಬ್ದಾರಿಯನ್ನು ಇಂಧನ ಇಲಾಖೆಯೇ ಹೊರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಫೆಡರೇಷನ್ ಅಧ್ಯಕ್ಷ ಜೆ.ಸತ್ಯಬಾಬು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬರುವ ಮುನ್ನಾ, ವಿದ್ಯುತ್ ಇಲಾಖೆಯ ಗುತ್ತಿಗೆದಾರರನ್ನು ಖಾಯಂಗೊಳಿಸುವುದಾಗಿ ನೀಡಿದ್ದ ಆಶ್ವಾಸನೆಯಂತೆ, ರಾಜ್ಯ ಸರಕಾರವೂ, ಕೆಪಿಟಿಸಿಎಲ್, ಕೆಪಿಸಿಎಲ್, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಹಾಗೂ ಬೆಸ್ಕಾಂಗಳಡಿಯಲ್ಲಿ ದುಡಿಯುತ್ತಿರುವ ಎಲ್ಲ ಕಾರ್ಮಿಕರನ್ನು ಈ ಕೂಡಲೇ ಖಾಯಂ ಗೊಳಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್‌ನ ಪದಾಧಿಕಾರಿಗಳು ಸೇರಿದಂತೆ ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.