ಅಕ್ರಮವಾಗಿ ಭೂಮಿ ಕಬಳಿಕೆ: ಆರೋಪ
ಬೆಂಗಳೂರು, ಜು.9: ನೆಲಮಂಗಲ ತಾಲೂಕಿನ ಅರಿಶಿನ ಕುಂಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಭೂಮಿಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಹಲವಾರು ಸರಕಾರಿ ಭೂಮಿಯನ್ನು ಹಿಂದಿನ ಹಾಗೂ ಇಂದಿನ ರಾಜಕೀಯ ನಾಯಕರು, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಕಬಳಿಸಿಕೊಂಡು ನಿವೇಶನಗಳನ್ನಾಗಿ ಹಾಗೂ ಬಡಾವಣೆಗಳನ್ನಾಗಿ ಪರಿವರ್ತಿಸಿದ್ದಾರೆ ಎಂದು ಹೇಳಿದರು.
ಸರ್ವೆ ನಂ.24 ರಲ್ಲಿ ಬಿಎಂಆರ್‌ಡಿಯಿಂದ ಅನುಮತಿ ಪಡೆದು, 63 ನಿವೇಶಗಳನ್ನು ವಿಂಗಡಿಸಿದ್ದಾರೆ. ಹಾಗೂ ಗ್ರಾಮ ಪಂಚಾಯತ್ ನಕ್ಷೆ ಹರಿದು ಹಾಕಿ ಬೇರೊಂದು ನಕ್ಷೆ ತಯಾರಿಸಿದ್ದಾರೆ. ಮತ್ತೊಂದು ಸರ್ವೆ ನಂ.ನಲ್ಲಿ ಪಾರ್ಕ್ ಸ್ಥಳವನ್ನು ಕಬಳಿಸಿ ಬಡಾವಣೆ ನಿರ್ಮಿಸಿದ್ದಾರೆ. ಅಲ್ಲದೆ, ಯಾವುದೇ ಸಿಎ ಮತ್ತು ಪಾರ್ಕ್‌ಗಾಗಿ ಕಾಯ್ದಿರಿಸದ ಸರಕಾರಿ ಜಾಗ ಒತ್ತುವರಿ ಮಾಡಿ ಮಾರಾಟ ಮಾಡಿದ್ದಾರೆ ಹಾಗೂ ಹಳ್ಳದ ಜಾಗವನ್ನು ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿದ್ದಾರೆ. ಇಷ್ಟಲ್ಲದೆ, ಹತ್ತಾರು ಸರಕಾರಿ ಎಕರೆ ಭೂಮಿಯನ್ನು ಕಬಳಿಕೆ ಮಾಡಿ ಮಾರಾಟ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.