ಸರಕಾರ ಆರೋಗ್ಯ ಯೋಜನೆಗಳಿಗೆ 800 ಕೋಟಿ ಖರ್ಚು ಮಾಡುತ್ತಿದೆ: ಸಚಿವ ಶಿವಾನಂದ ಎಸ್.ಪಾಟೀಲ್
ಬೆಂಗಳೂರು, ಜು.9: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಯಶಸ್ವಿನಿ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಭಾಗ್ಯ ಸೇರಿ ಇತರೆ ಆರೋಗ್ಯ ಯೋಜನೆಗಳಿಗೆ 800 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದ್ದಾರೆ.
ಸೋಮವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಶಸ್ವಿನಿ ಯೋಜನೆ ಅಡಿಯಲ್ಲಿ 44 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ, 1 ಕೋಟಿ 20 ಲಕ್ಷ ಜನರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಈ ಕಾರ್ಡ್‌ನ ಅಡಿಯಲ್ಲಿ ಚಿಕಿತ್ಸೆ ಪಡೆದರೆ ಶೇ.3ರಷ್ಟು ಆರ್ಥಿಕ ವಿನಾಯಿತಿ ನೀಡಲಾಗುತ್ತದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2.20 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಮಾತನಾಡಿ, ಬಿಪಿಎಲ್ ಕಾರ್ಡ್‌ದಾರರು ಚಿಕಿತ್ಸೆ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದರೆ ಆರೋಗ್ಯ ಪೂರ್ತಿಯಾಗಿ ಸುಧಾರಿಸುವವರೆಗೂ ಚಿಕಿತ್ಸೆ ನೀಡಬೇಕು. ಆದರೆ, ಕೆಲ ಆಸ್ಪತ್ರೆಗಳು ತಮ್ಮಲ್ಲಿ ಕೆಲ ಸೌಲಭ್ಯಗಳು ಇಲ್ಲವೆಂದು ಹೇಳಿ ಬೇರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸುತ್ತಾರೆ. ಹೀಗಾಗಿ, ಈ ತಾರತಮ್ಯ ನಿಲ್ಲಬೇಕು. ಹಾಗೂ ಶೇ.3ರಷ್ಟು ಆರ್ಥಿಕ ವಿನಾಯಿತಿ ಬದಲು ಶೇ.50ರಷ್ಟು ಆರ್ಥಿಕ ವಿನಾಯಿತಿ ನೀಡಬೇಕೆಂದು ಸಚಿವರನ್ನು ಒತ್ತಾಯಿಸಿದರು.