ಇಂತಹ ದಾಳಿಗಳು ಎಷ್ಟರಮಟ್ಟಿಗೆ ಸರಿ..?

Update: 2018-07-09 18:42 GMT

ಮಾನ್ಯರೇ,

ಮಕ್ಕಳ ಕಳ್ಳರ ವದಂತಿ ವಿಚಾರ ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸುತ್ತಿವೆೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಗುಂಪೊಂದು ಐವರನ್ನು ಥಳಿಸಿ ಕೊಂದು ಹಾಕಿತ್ತು. ಹೀಗೆ ಕಳೆದ ಒಂದು ವರ್ಷದಲ್ಲಿ ನಮ್ಮ ದೇಶದಲ್ಲಿ ಈ ವದಂತಿಗೆ ಬಲಿಯಾದವರ ಸಂಖ್ಯೆ 32. ಇದರ ಬೆನ್ನಲ್ಲೇ ಮೊನ್ನೆ ದಕ್ಷಿಣ ಕನ್ನಡದ ಉಜಿರೆಯಲ್ಲಿ ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ಅಪ್ಪನಿಗೆ ಥಳಿಸಲಾಗಿದೆ. ಇಂತಹ ದಾಳಿಗಳು, ಹಲ್ಲೆ ಪ್ರವೃತ್ತಿ ಎಷ್ಟರಮಟ್ಟಿಗೆ ನ್ಯಾಯಯುತವಾದುದು..?
ಯಾವುದೇ ವ್ಯಕ್ತಿಯ ನಡೆ ಸಂಶಯಾಸ್ಪದ ರೀತಿಯಲ್ಲಿದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಆದರೆ ಸಂಶಯಪಟ್ಟು ತಾವೇ ಕಾನೂನನ್ನು ಕೈಗೆತ್ತಿಕೊಂಡು ದಾಳಿ ಮಾಡಿದ ಪರಿಣಾಮ ಅನೇಕ ಜೀವಗಳು ಬಲಿಯಾಗಿವೆ. ಇದಕ್ಕೆ ಯಾರು ಹೊಣೆ..? ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಲ್ಲದ ಮಾಹಿತಿ ದಿನದಿಂದ ದಿನಕ್ಕೆ ಮತ್ತಷ್ಟು ಆತಂಕಗಳನ್ನು ಸೃಷ್ಟಿಸುವ ಜೊತೆಗೆ ದುರಂತಗಳಿಗೆ ಕಾರಣವಾಗುತ್ತಿದೆ. ಪೊಲೀಸ್ ಇಲಾಖೆಗೂ ಹೆದರದೆ ಹಾಡಹಗಲೇ ಇಂತಹ ದಾಳಿಗಳು ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದೊಂದು ತರಹ ಅನಾಗರಿಕ ವರ್ತನೆಯೇ ಸರಿ. ಮಕ್ಕಳ ಕಳ್ಳರ ಬಗ್ಗೆ ಪರಾಮರ್ಶಿಸಿ ಸತ್ಯ ಅರಿತು ಮುಂದೆ ಕಾನೂನು ಕ್ರಮ ತೆಗೆದು ಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು. ಹಾಗೆಯೇ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಲ್ಲಿ ಬರುವ ಎಲ್ಲವೂ ಸತ್ಯ ಆಗಿರುವುದಿಲ್ಲವೆಂದು ನಾಗರಿಕರು ಅರಿತುಕೊಳ್ಳಬೇಕು. ಸುಳ್ಳು ವದಂತಿ, ಸುಳ್ಳು ವಿಚಾರಗಳಿಗೆ ಅಮಾಯಕರು ಬಲಿಯಾಗದಂತೆ ನಾಗರಿಕ ಸಮಾಜ ನೋಡಿಕೊಳ್ಳಬೇಕಾದ ಅನಿವಾರ್ಯ ಇದೆ.

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News