ಜೆಡಿಎಸ್ ಲೆಕ್ಕಾಚಾರ ಅರ್ಥವಾಗುತ್ತಿಲ್ಲ: ಜಗದೀಶ್ ಶೆಟ್ಟರ್

Update: 2018-07-10 14:57 GMT

ಬೆಂಗಳೂರು, ಜು.10: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಜ್ಯದ ರೈತರ 53 ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಯಾವ ರೀತಿಯ ಲೆಕ್ಕಾಚಾರದ ಆಧಾರದ ಮೇಲೆ ಭರವಸೆ ನೀಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಹಿರಿಯ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ ಬಳಿಕವೂ 4-5 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಹಕಾರದಿಂದ 34 ಸಾವಿರ ಕೋಟಿ ರೂ.ಮನ್ನಾ ಮಾಡುತ್ತಿರುವುದಾಗಿ ಹೇಳುತ್ತಿದ್ದೀರಿ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರೆ 53 ಸಾವಿರ ಕೋಟಿ ರೂ.ಮನ್ನಾ ಮಾಡುವುದಾಗಿ ಹೇಳಿರುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ಜನರಿಗೆ ನೀವು ಸುಳ್ಳು ಭರವಸೆ ನೀಡಿ ವಂಚಿಸುತ್ತಿರುವುದು ಗೊತ್ತಾಗಿದೆ. ಅದಕ್ಕೆ ನಿಮ್ಮನ್ನು 40 ರಿಂದ 37ಕ್ಕೆ ಇಳಿಸಿದರು. ಸಾಲ ಮನ್ನಾ ಘೋಷಣೆ ಹೊರ ಬಿದ್ದ ಬಳಿಕ ರಾಜ್ಯಾದ್ಯಂತ ನಿಮ್ಮ ಪರವಾಗಿ ಜಯಘೋಷಗಳು ಮೊಳಗಬೇಕಿತ್ತು. ಆದರೆ, ಇವತ್ತು ಏನಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸಾಲ ಮನ್ನಾ ಮಾಡಲು ಹಲವಾರು ಶರತ್ತುಗಳನ್ನು ಹಾಕಲಾಗಿದೆ ಎಂದು ಅವರು ದೂರಿದರು.

ಪಹಣಿ ಪತ್ರಕ್ಕೆ 10 ರೂ.ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಇವತ್ತು 4 ಪುಟಕ್ಕಿಂತ ಹೆಚ್ಚಿನ ಪಹಣಿ ಪತ್ರಕ್ಕೆ 50 ರೂ.ಗಳನ್ನು ರೈತರಿಂದ ವಸೂಲು ಮಾಡಲಾಗುತ್ತಿದೆ. ಸಾಲ ಮನ್ನಾದಲ್ಲಿ ಬೆಳಗಾವಿ ಜಿಲ್ಲೆಯ ಪಾಲು 7 ಸಾವಿರ ಕೋಟಿ ರೂ.ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ, ವಾಸ್ತವವಾಗಿ ರೈತರಿಗೆ ಅನುಕೂಲವಾಗುವುದು 7.70 ಕೋಟಿ ರೂ.ಗಳು ಮಾತ್ರ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಆಂಗ್ಲ ದಿನಪತ್ರಿಕೆಯೊಂದರಲ್ಲಿ ಬಜೆಟ್ ಮಂಡನೆಯಾದ ಮಾರನೆ ದಿನ ಪ್ರಕಟವಾದ ಒಂದು ವರದಿಯಲ್ಲಿ ಸಾಲ ಮನ್ನಾದಿಂದಾಗಿ ಶೇ.2.54-ಮುಸ್ಲಿಮರು, ಶೇ.3.5-ನಾಯಕರು, ಶೇ.4.3-ಮಾದಿಗರು, ಶೇ.4.8-ಕುರುಬರು, ಶೇ.10.9- ಲಿಂಗಾಯತರು, ಶೇ.11.9-ಆದಿ ಕರ್ನಾಟಕ, ಶೇ.12.1-ಗೊಲ್ಲ ಹಾಗೂ ಶೇ.32ರಷ್ಟು ಒಕ್ಕಲಿಗರಿಗೆ ಅನುಕೂಲವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.

ಎಲ್ಲ ರೈತರು ಒಂದೇ. ಈ ಅಂಕಿ ಅಂಶಗಳ ಕುರಿತು ರಾಜ್ಯ ಸರಕಾರವೆ ಸ್ಪಷ್ಟಣೆ ನೀಡಬೇಕು. 2014-17ರ ವರೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 91.28 ಲಕ್ಷ ಜನರು 61,100 ಕೋಟಿ ರೂ., ಖಾಸಗಿ ಬ್ಯಾಂಕುಗಳಲ್ಲಿ 17.88 ಲಕ್ಷ ಜನರು 13,623 ಕೋಟಿ ರೂ., ಪ್ರಾದೇಶಿಕ ಹಾಗೂ ಗ್ರಾಮೀಣ ಬ್ಯಾಂಕುಗಳಲ್ಲಿ 37.18 ಲಕ್ಷ ಜನ 24,467 ಕೋಟಿ ರೂ., ಸಹಕಾರ ಸಂಘಗಳಿಂದ 78.13 ಲಕ್ಷ ಜನರು 35,998 ಕೋಟಿ ರೂ. ಹೀಗೆ ಒಟ್ಟಾರೆಯಾಗಿ 2.25 ಕೋಟಿ ಜನ, 1,35,191 ಕೋಟಿ ರೂ.ಗಳ ಬೆಳೆ ಸಾಲವನ್ನು ಪಡೆದಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅಂಕಿ ಅಂಶಗಳನ್ನು ಮುಂದಿಟ್ಟರು.

ಆದರೆ, ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಯಾವ ರೀತಿಯಲ್ಲಿ 53 ಸಾವಿರ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುವ ಭರವಸೆ ನೀಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಬಜೆಟ್‌ನಲ್ಲಿ 34 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಆದರೆ, ಈ ವರ್ಷ ಸಾಲ ಮನ್ನಾ ಮಾಡಲು ಇಟ್ಟಿರುವ ಮೊತ್ತ ಕೇವಲ 6 ಸಾವಿರ ಕೋಟಿ ರೂ.ಗಳು ಮಾತ್ರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಸಿ.ಎನ್.ಬಾಲಕೃಷ್ಣ, ಯಾವುದೇ ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಜಾತಿ ಪ್ರಮಾಣ ಪತ್ರವನ್ನು ಪಡೆಯುವುದಿಲ್ಲ. ಜಾತಿ ಆಧಾರಿತವಾಗಿ ಪ್ರಕಟಿಸಿರುವ ಸುದ್ದಿುೂ ಆಧಾರ ರಹಿತವಾದದ್ದು ಎಂದರು. ಈ ಸಂದರ್ಭದಲ್ಲಿ ಕೆಲಕಾಲ ಜೆಡಿಎಸ್ ಸದಸ್ಯರಾದ ಸಿ.ಎನ್.ಬಾಲಕೃಷ್ಣ, ಶಿವಲಿಂಗೇಗೌಡ ಹಾಗೂ ಬಿಜೆಪಿ ಸದಸ್ಯರಾದ ಸಿ.ಟಿ.ರವಿ, ಜಗದೀಶ್ ಶೆಟ್ಟರ್ ನಡುವೆ ಮಾತಿನ ಚಕಮಕಿ ನಡೆಯಿತು.

ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, 2017ರ ಡಿ.31ರವರೆಗೆ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸುಸ್ಥಿ ಸಾಲ 561 ಕೋಟಿ ರೂ.ಮಾತ್ರ, ಚಾಲ್ತಿ ಸಾಲ 10,734 ಕೋಟಿ ರೂ.ಗಳು. ಸರಕಾರ ಚಾಲ್ತಿ ಸಾಲವನ್ನು ಮನ್ನಾ ಮಾಡದಿದ್ದರೆ ಇದರಿಂದ ಯಾವ ರೈತರಿಗೂ ಪ್ರಯೋಜನವಾಗುವುದಿಲ್ಲ ಎಂದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ತಮ್ಮ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಈ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸಲಿ ಎಂದು ಯಡಿಯೂರಪ್ಪ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News