ಡಿಕೆಶಿ-ಬಿಜೆಪಿ ಸದಸ್ಯರ ನಡುವೆ ವಾಗ್ವಾದ

Update: 2018-07-10 15:00 GMT

ಬೆಂಗಳೂರು, ಜು.10: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಕೇವಲ ರಾಮನಗರ, ಮಂಡ್ಯ ಹಾಗೂ ಹಾಸನಕ್ಕೆ ಸೀಮಿತವಾದದ್ದು ಎಂದು ಬಿಜೆಪಿ ಸದಸ್ಯ ಜಗದೀಶ್ ಶೆಟ್ಟರ್ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಯಾಗಿ ನೀವು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.

ಬಜೆಟ್‌ನಲ್ಲಿ ರಾಮನಗರಕ್ಕೆ ಎಷ್ಟು ಅನುದಾನ ತೆಗೆದುಕೊಂಡು ಹೋಗಲಾಗಿದೆ. ರೇಶ್ಮೆ ಬೆಳೆಗೆ ಪ್ರೋತ್ಸಾಹ ನೀಡಲು ಐದು ಕೋಟಿ ಅನುದಾನ ನೀಡಿದರೆ ಅದೇ ದೊಡ್ಡದೇ? ಎಂದು ಶಿವಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಮಾಧುಸ್ವಾಮಿ, ರಾಮನಗರಕ್ಕೂ ಫಿಲ್ಮ್ ಸಿಟಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.

'ಶೋಲೆಯಂತಹ ಸಿನಿಮಾ ಚಿತ್ರೀಕರಣವಾಗಿದ್ದು ರಾಮನಗರದಲ್ಲಿಯೆ ಹೊರತು, ಬಿಜಾಪುರದಲ್ಲೋ, ಬಾಗಲಕೋಟೆಯಲ್ಲೋ ಅಲ್ಲ. ಸಿನಿಮಾ ಮಾಡುವವರು ಅಲ್ಲಿಗೆ ಯಾರು ಬರುವುದಿಲ್ಲ. ಆದುದರಿಂದ, ರಾಮನಗರದಲ್ಲಿ ಫಿಲ್ಮ್ ಸಿಟಿ ಮಾಡುವುದರಿಂದ ಚಲನಚಿತ್ರ ಉದ್ಯಮಕ್ಕೆ ಅನುಕೂಲವಾಗುತ್ತದೆ' ಎಂದು ಅವರು ಸಮರ್ಥಿಸಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರ ನಡುವೆ ವಾಗ್ವಾದವು ನಡೆಯಿತು. ರೈತರ ಸಾಲ ಮನ್ನಾ ವಿಚಾರವನ್ನು ಜಾತಿಯ ಆಧಾರದಲ್ಲಿ ನೋಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯರ ವಿರುದ್ಧ ಕಿಡಿಗಾರಿದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯರು, ಈ ವಿಚಾರದ ಬಗ್ಗೆ ನಿಮ್ಮ ಆಕ್ಷೇಪವಿದ್ದರೆ ಈ ವರದಿಯನ್ನು ಪ್ರಕಟಿಸಿರುವ ಪತ್ರಿಕೆ ಮೇಲೆ ಪ್ರಕರಣ ದಾಖಲಿಸಿ ಎಂದರು. ಇದೇ ಮಾತಿಗೆ ನಿಂತ ವಿರೋಧ ಪಕ್ಷದ ಉಪ ನಾಯಕ ಗೋವಿಂದ ಕಾರಜೋಳ, ರಾಜ್ಯದ ಮೊಟ್ಟಮೊದಲ ಶ್ರೇಷ್ಠ ನಟಿ ಅಮೀರ್‌ಬಾಯಿ ಕರ್ನಾಟಕಿ ಸೇರಿದಂತೆ ಅನೇಕ ಮಹಾನ್ ಕಲಾವಿದರು, ಬಾಗಲಕೋಟೆ, ಬಿಜಾಪುರದವರು. ನಾಡಿನ ಕಲೆ, ಸಾಹಿತ್ಯಕ್ಕೆ ನಮ್ಮ ಜಿಲ್ಲೆಯವರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಹೈದರಾಬಾದ್-ಕರ್ನಾಟಕ ಭಾಗದಲ್ಲಿ 40 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಸರಕಾರ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಜಗದೀಶ್ ಶೆಟ್ಟರ್ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಹಿರಿಯ ಸದಸ್ಯ ಜಗದೀಶ್ ಶೆಟ್ಟರ್ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.

40 ಸಾವಿರ ಹುದ್ದೆಗಳು ಖಾಲಿಯಿಲ್ಲ. ಹಿಂದಿನ ಸರಕಾರದ ಅವಧಿಯಲ್ಲಿ ಸಾಕಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಳಿದಿರುವ 19 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೈದರಾಬಾದ್-ಕರ್ನಾಟಕ, 371 ಜೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಲಿಂಬಾವಳಿ-ಖರ್ಗೆ ವಾಗ್ವಾದ: ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಉಪ ಪ್ರಧಾನಿಯಾಗಿದ್ದ ಎಲ್.ಕೆ.ಅಡ್ವಾನಿ ನಮ್ಮ ಮನವಿಯನ್ನು ತಿರಸ್ಕರಿಸಿದ್ದರು ಎಂದು ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ, ಅಂದು ಕೇಂದ್ರ ಸರಕಾರಕ್ಕೆ ಸಲ್ಲಿಸಲು ಉದ್ದೇಶಿಸಿದ್ದ ಮನವಿ ಪತ್ರದಲ್ಲಿ ಎಚ್.ಕೆ.ಪಾಟೀಲರು ತಿದ್ದುಪಡಿ ಮಾಡದೇ ಇದ್ದಿದ್ದರೆ ಕೇಂದ್ರ ಸರಕಾರ ತಿರಸ್ಕರಿಸುತ್ತಿರಲಿಲ್ಲ ಎಂದರು. ಈ ಸಂದರ್ಭದಲ್ಲಿ ಇಬ್ಬರು ನಡುವೆ ಕೆಲಕಾಲ ವಾಗ್ವಾದ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News