×
Ad

ರಾಜ್ಯವನ್ನು ‘ಉಡ್ತಾ ಕರ್ನಾಟಕ’ ಆಗಲು ಬಿಡುವುದಿಲ್ಲ: ಡಾ.ಜಿ.ಪರಮೇಶ್ವರ್

Update: 2018-07-10 20:46 IST

ಬೆಂಗಳೂರು, ಜು.10: ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ತಡೆಗಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಒಟ್ಟು 2,484 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 142 ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ 40 ಪ್ರಕರಣಗಳು ಖುಲಾಸೆಗೊಂಡಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಪ್ರತಾಪ್‌ ಚಂದ್ರಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಲೇಜು, ಶಾಲೆ ಹಾಗೂ ಪಾರ್ಕ್‌ಗಳ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಗಳ ಪೈಕಿ 142 ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿ 40 ಪ್ರಕರಣಗಳು ಖುಲಾಸೆಗೊಂಡಿವೆ ಎಂದು ಹೇಳಿದರು.

ಪಂಜಾಬ್‌ನಲ್ಲೂ ಈ ಹಿಂದೆ ವ್ಯಾಪಕ ಮಾದಕ ವಸ್ತುಗಳ ಮಾರಾಟ ದಂಧೆ ನಡೆದಿತ್ತು. ಆದರೆ, ಈಗ ಅಲ್ಲಿನ ಸರಕಾರ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಿದ್ದು, ‘ಉಡ್ತಾ ಪಂಜಾಬ್’ ಎಂಬ ಹೆಸರಿನ ಹಣೆಪಟ್ಟಿಯಿಂದ ಹೊರ ಬಂದಿದೆ. ರಾಜ್ಯದಲ್ಲೂ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕುತ್ತಿದ್ದು, ಕರ್ನಾಟಕವನ್ನು ಮತ್ತೊಂದು ಉಡ್ತಾ ಪಂಜಾಬ್ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

5 ಕೋಟಿ ರೂ.ಮೌಲ್ಯದ ಮಾತ್ರೆ (ಮಾದಕ ದ್ರವ್ಯ ತುಂಬಲಾಗಿತ್ತು)ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಮಾದಕ ವಸ್ತುಗಳ ಮಾರಾಟ ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಹೀಗಾಗಿ, ಈ ಮಾದಕ ವಸ್ತುಗಳ ಬಳಕೆಗಳನ್ನು ತಡೆಗಟ್ಟಲು ಮಾದಕ ದ್ರವ್ಯ ವಿರೋಧಿ ಜಾಥಾ ಮೆರವಣಿಗೆ, ಮಾದಕ ವಿರೋಧಿ ಕಾರ್ಯಾಗಾರ ಸಭೆಗಳನ್ನು ಜಿಲ್ಲಾ ಮತ್ತು ನಗರ ಮಟ್ಟದಲ್ಲಿ ಆಯೋಜಿಸಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಪೊಲೀಸರು ಸ್ವಯಂ ಪ್ರೇರಿತರಾಗಿ ಶಾಲಾ ಕಾಲೇಜುಗಳ ಬಳಿಯಲ್ಲಿ ಮಾದಕ ವಸ್ತುಗಳು ದೊರೆಯಬಹುದಾದ ಸ್ಥಳಗಳು, ವಹಿವಾಟು ಮಾಡುವ ವ್ಯಕ್ತಿಗಳು, ಪ್ರೇರಣೆ ನೀಡುತ್ತಿರುವ ವ್ಯಕ್ತಿಗಳು, ಮಧ್ಯವರ್ತಿಗಳು ಇಂತಹವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಬೆಳಗಾವಿ, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಗಾಂಜಾವನ್ನು ಬೆಳೆಯುತ್ತಾರೆ ಎಂಬ ಮಾಹಿತಿ ಇದೆ. ಅದೇ ರೀತಿಯಾಗಿ ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಠಾಣಾಗಳಲ್ಲಿ ಸಿಇಎನ್ ಎಂಬ ಪ್ರತ್ಯೇಕ ವಿಭಾಗಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News