ಅರಣ್ಯ ಪ್ರದೇಶದಲ್ಲಿನ ವಿಶ್ರಾಂತಿ ಗೃಹಗಳಿಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ
ಬೆಂಗಳೂರು, ಜು.10: ಅರಣ್ಯ ಪ್ರದೇಶಗಳಲ್ಲಿರುವ ವಿಶ್ರಾಂತಿ ಗೃಹಗಳು, ತಪಾಸಣೆ ಬಂಗಲೆಗಳಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳಲು ಅಲಭ್ಯವಾಗಲಿವೆ. ಅರಣ್ಯ ಪ್ರದೇಶಗಳಲ್ಲಿರುವ ಇಂತಹ ಕಟ್ಟಡಗಳನ್ನು ದುರುಪಯೋಗ ಪಡಿಸಿಕೊಳ್ಳದಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇಂತಹ ಅನೇಕ ಜಾಗಗಳನ್ನು ಗುರುತಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಕೆಲವು ವಿಶ್ರಾಂತಿ ಗೃಹಗಳನ್ನು ಜಂಗಲ್ ಲಾಡ್ಜರ್ಸ್ ಅಂಡ್ ರೆಸಾರ್ಟ್ಸ್ ಲಿಮಿಟೆಡ್‌ಗೆ ಪ್ರವಾಸೋದ್ಯಮ ಉದ್ದೇಶಗಳಿಗೆ ನೀಡಲಾಗಿದೆ. ಅರಣ್ಯದಲ್ಲಿರುವ ಇಂತಹ ವಸತಿಗಳನ್ನು ಪ್ರವಾಸೋದ್ಯಮ ಉದ್ದೇಶಗಳಿಗೆ ನೀಡುವಂತಿಲ್ಲ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಿಂತೆಗೆದುಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯ ವಸತಿ ಗೃಹಗಳನ್ನು ಖಾಸಗಿ ಅಥವಾ ವಾಣಿಜ್ಯ ಸಂಸ್ಥೆಗಳಿಗೆ ಪ್ರವಾಸೋದ್ಯಮಕ್ಕೆ ವರ್ಗಾಯಿಸುವಂತಿಲ್ಲ ಎಂದು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ. ಆದರೆ, ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಗವತಿ ಪ್ರಕೃತಿ ತಾಣ ಮತ್ತು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಸೀತನಾಡಿಗಳನ್ನು ಜೆಎಲ್ಆರ್ ಗ್ರೂಪ್‌ಗಳಿಗೆ ಹಸ್ತಾಂತರ ಮಾಡಲಾಗಿದೆ ಎಂದು ಕಾರ್ಯಕರ್ತರು ಆರೋಪಿದ್ದಾರೆ.
ಅಲ್ಲದೆ, ಭೀಮಗಡದ ವನ್ಯಜೀವಿ ಅಭಯಾರಣ್ಯದ ಹೆಮ್ಮಗಾಡ ಪ್ರಕೃತಿ ತಾಣ, ದಾಂಡೇಲಿಯ ಕ್ಯಿಸಲ್ ರಾಕ್ ಸಾಹಸ ಶಿಬಿರ ತಾಣ, ಚಿತ್ರದುರ್ಗದಲ್ಲಿರುವ ಜೊಗ್ಗಿಮಟ್ಟಿ ಎನ್‌ಸಿ ಮತ್ತು ಚಿಕ್ಕಮಗಳೂರಿನ ಮಲಯ ಮಾರುತ ಐಬಿಗಳನ್ನು ಪ್ರವಾಸೋದ್ಯಮ ಉದ್ದೇಶಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿ ಪ್ರಕಾರ ಅರಣ್ಯಗಳಲ್ಲಿರುವ ವಿಶ್ರಾಂತಿ ಗೃಹಗಳು ಮತ್ತು ಬಂಗಲೆಗಳು ಸಂರಕ್ಷಣೆಗಾಗಿ ಮೀಸಲಿಡಬೇಕಾಗಿದ್ದು, ಪ್ರವಾಸೋದ್ಯಮಕ್ಕಾಗಿ ಇರುವುದಲ್ಲ. ಅವುಗಳನ್ನು ಖಾಸಗಿಯವರಿಂದ ಮತ್ತೆ ರಾಜ್ಯ ಸರಕಾರಕ್ಕೆ ಹಿಂಪಡೆಯಬೇಕಾಗಿದೆ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು ಆಗ್ರಹಿಸಿದ್ದಾರೆ.