×
Ad

ವಿದ್ಯುತ್ ಚಾಲಿತ ದ್ವಿಚಕ್ರ ವಾಹನ, ಬಿತ್ತನೆ ಉಪಕರಣ ಆವಿಷ್ಕಾರ

Update: 2018-07-10 21:10 IST

ಬೆಂಗಳೂರು, ಜು.10: ನಗರದ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಜನಸಾಮಾನ್ಯರಿಗೆ ಅನುಕೂಲವಾಗುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮತ್ತು ರೈತರ ಉಳುಮೆ ಹಾಗೂ ಬೀಜಬಿತ್ತನೆ ಉಕರಣವನ್ನು ಆವಿಷ್ಕಾರ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಕೆ.ಎಲ್.ಶಿವಬಸಪ್ಪ, ವಿದ್ಯಾರ್ಥಿಗಳು ಬಜಾಜ್ ಚೇತಕ್ ಸ್ಕೂಟರನ್ನು ಇ-ಸ್ಕೂಟರ್ ಆಗಿ ಪರಿವರ್ತಿಸಿದ್ದಾರೆ. ಅದಕ್ಕಾಗಿ ವಿದ್ಯುತ್ ಬ್ಯಾಟರಿ ತಯಾರಿಸಿದ್ದು, ಅದರಿಂದ ವಾಹನ ಚಲಿಸುತ್ತದೆ. ಇದರಿಂದ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ. ಇದರ ತಯಾರಿ ವೆಚ್ಚ ಸುಮಾರು 12 ಸಾವಿರ ರೂ. ಆಗಿದ್ದು, ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದು ತಿಳಿಸಿದರು.

ಈ ಯಂತ್ರವು ಗಂಟೆಗೆ 40 ರಿಂದ 45 ಕಿ.ಮೀ ಸಂಚರಿಸಲಿದ್ದು, 4-5 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ 3.5 ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಅಲ್ಲದೆ ಎಸಿ ಅಡಾಪ್ಟರ್‌ನಿಂದಲೂ ಚಾರ್ಜ್ ಮಾಡಬಹುದು. ಹೆಚ್ಚಿನ ನಿರ್ವಹಣೆ ಅಗತ್ಯವಿರುವುದಿಲ್ಲ ಹಾಗೂ ಎಲ್ಲ ಕಡೆಗಳಲ್ಲಿಯೂ ಸುಲಭವಾಗಿ ಸಾಗಿಸಬಹುದು. ಹೆಚ್ಚುತ್ತಿರುವ ಭೂತಾಪಮಾನ ಕಡಿಮೆ ಮಾಡಲು, ಇಂಧನ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಸಣ್ಣ ಇಡುವಳಿದಾರ ರೈತರಿಗೆ ನೆರವಾಗುವ ಉಪಕರಣ ಆವಿಷ್ಕರಿಸಿದ್ದು, ರೈತರ ಸಮಯ ಹಾಗೂ ತೊಂದರೆ ನಿವಾರಿಸಲಿದೆ. ಭೂಮಿ ಉಳುಮೆ, ಬಿತ್ತನೆ ಬೀಜಗಳ ಆಯ್ಕೆ, ಗುಣಮಟ್ಟ ಸುಧಾರಣೆ, ನೀರಾವರಿ, ಕಟಾವು ಸೇರಿ ಬಹುಪಯೋಗಿ ಕೆಲಸಗಳಿಗೆ ಇದನ್ನು ಬಳಸಬಹುದು. ಡ್ರಮ್ ಬಳಸಿ ಇದನ್ನು ತಯಾರು ಮಾಡಿದ್ದು, ಬೀಜಗಳನ್ನು ಡ್ರಮ್‌ನಲ್ಲಿ ತುಂಬಿಸಿ ಬಿತ್ತನೆ ಮಾಡಬಹುದು. ವೆಚ್ಚ 600ರಿಂದ 800 ತಗಲಿದ್ದು, ರೈತರಿಗೆ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್, ಮೆಕಾನಿಕಲ್ ವಿಭಾಗದ ಹೆಚ್‌ಓಡಿ ಡಾ.ಮಹಾದೇವ ಸ್ವಾಮಿ, ವಿದ್ಯಾರ್ಥಿಗಳಾದ ಬಿ.ಭರತ್‌ಕುಮಾರ್, ಬಿ.ಹೇಮಂತ್‌ಕುಮಾರ್, ಲೋಕನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News