ಹೆಲ್ಮೆಟ್ ಧರಿಸದವರಿಗೆ ಯಮನಿಂದ ಸ್ವಾಗತ: ಹಲಸೂರು ಗೇಟ್ ಸಂಚಾರ ಪೊಲೀಸರಿಂದ ವಿನೂತನ ಜಾಗೃತಿ

Update: 2018-07-10 15:41 GMT

ಬೆಂಗಳೂರು, ಜು.10: ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದವರಿಗೆ ಯಮ ವೇಷಧಾರಿಯಿಂದ ಗುಲಾಬಿ ಹೂ ನೀಡಿ ಸ್ವಾಗತಿಸುವ ಮೂಲಕ ಸಂಚಾರ ಪೊಲೀಸರು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದರು.

ಮಂಗಳವಾರ ನಗರದ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ಪೊಲೀಸರು ಕಾರ್ಪೊರೇಷನ್ ವೃತ್ತ ಹಾಗೂ ಪುರಭವನದ ಬಳಿ ಯಮ ವೇಷಧಾರಿಯಿಂದ ಹೂ ಕೊಡಿಸಿ, ಹೆಲ್ಮೆಟ್ ಧರಿಸದಿದ್ದರೆ ಯಮ ಸ್ವಾಗತಿಸುತ್ತಾನೆ ಎಂಬ ಸಂದೇಶ ನೀಡಿ ಎಚ್ಚರಿಸಿದರು.

ರಾಜಧಾನಿ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ, ಮೊಕದ್ದಮೆ ದಾಖಲಿಸಿಕೊಂಡು ದಂಡ ವಿಧಿಸಿದರೂ ಸಹ ಹೆಲ್ಮೆಟ್ ಧರಿಸದೇ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಿದ್ದರೂ ಸಹ ದ್ವಿಚಕ್ರವಾಹನ ಸವಾರರು ಈ ನಿಯಮ ಪಾಲಿಸುತ್ತಿಲ್ಲವಾದ್ದರಿಂದ ಸಂಚಾರ ಪೊಲೀಸರು ಈ ಮೂಲಕ ಜಾಗೃತಿ ಮೂಡಿಸಿದರು.

ಗಂಗಾವತಿಯ ರಂಗಭೂಮಿ ಕಲಾವಿದ ವೀರೇಶ್ ಮುದ್ದಿನಮಠ ಎಂಬುವವರು ಯಮ ವೇಷಧಾರಿಯಾಗಿ ಬೈಕ್ ಸವಾರರಿಗೆ ಎಚ್ಚರಿಕೆ ಸಂದೇಶ ನೀಡಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಮನವೊಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಮ ವೇಷಧಾರಿ ವೀರೇಶ್, ಎಲ್ಲ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸಿ ವಾಹನ ಚಾಲನೆ ಮಾಡಿ ತಮ್ಮ ಅಮೂಲ್ಯ ಪ್ರಾಣ ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News