×
Ad

ಅನಧಿಕೃತ ಕಟ್ಟಡಗಳಿಗೆ ದಂಡ ವಿಧಿಸಲು ಕ್ರಮ: ಡಾ.ಜಿ.ಪರಮೇಶ್ವರ್

Update: 2018-07-10 21:13 IST

ಬೆಂಗಳೂರು, ಜು.10: ಬೆಂಗಳೂರಿನಲ್ಲಿರುವ ಅನಧಿಕೃತ ಕಟ್ಟಡಗಳ ಪರಿಶೀಲನೆಗೆ ಖಾಸಗಿ ಸಂಸ್ಥೆಗೆ ವಹಿಸಿ, ನಿಯಮ ಬಾಹಿರ ಕಟ್ಟಡಗಳಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಅ.ದೇವೇಗೌಡ ನಿಯಮ 330ರ ಅಡಿಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಅನಿಧಿಕೃತ ಕಟ್ಟಡಗಳು ಲಕ್ಷಾಂತರ ಸಂಖ್ಯೆಯಲ್ಲಿವೆ ಎಂಬ ಅಂದಾಜಿದೆ. ಕೆಲವು ಅನಧಿಕೃತ ಕಟ್ಟಡಗಳನ್ನು ದಂಡ ಹಾಕಿ ಅಧಿಕೃತಗೊಳಿಸಿ, ಅಪಾಯಕಾರಿ ಹಂತದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಮಹದೇವಪುರ ಕ್ಷೇತ್ರದಲ್ಲಿರುವ ಅನಧಿಕೃತ ಕಟ್ಟಡಗಳ ಕುರಿತು ಖಾಸಗಿ ಸಂಸ್ಥೆಯಿಂದ ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕ್ಷೇತ್ರದಲ್ಲಿ ಸುಮಾರು 70ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ಗುರುತಿಸಿ, 450 ಕೋಟಿ ರೂ.ದಂಡ ವಿಧಿಸಲಾಗಿದೆ. ಅದೇ ಮಾದರಿಯಲ್ಲಿ ನಗರಾದ್ಯಂತ ಅನಧಿಕೃತ ಕಟ್ಟಡಗಳನ್ನು ಪರಿಶೀಲನೆ ನಡೆಸಿದರೆ ಸುಮಾರು 3ರಿಂದ 4ಸಾವಿರ ಕೋಟಿ ರೂ.ದಂಡ ವಸೂಲಿಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಮಾತನಾಡಿ, ನಗರದಲ್ಲಿ ಅನಧಿಕೃತ ಕಟ್ಟಡಗಳ ಸಂಖ್ಯೆ ಏರುತ್ತಲೆ ಇದೆ. ಇವುಗಳ ಕಡಿವಾಣಕ್ಕೆ ಕಟ್ಟುನಿಟ್ಟಿನ ಕಾನೂನು ಇಲ್ಲದಿರುವುದೆ ಅವಾಂತರಕ್ಕೆ ಕಾರಣವಾಗಿದೆ. ಹೀಗಾಗಿ ಕಾನೂನು ಮೀರಿ ಕಟ್ಟಿದ ಹೆಚ್ಚಿನ ಮಹಡಿಯನ್ನು ಸರಕಾರ ತನ್ನ ವಶಕ್ಕೆ ಪಡೆಯಬೇಕು. ಹಾಗೂ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್, ನೀರು ಸೇರಿದಂತೆ ಯಾವುದೆ ಸೌಲಭ್ಯಗಳನ್ನು ನೀಡದಂತೆ ಸೂಕ್ತ ಕಾನೂನು ತರಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಅನಧಿಕೃತ ಕಟ್ಟಡಗಳ ಕಡಿವಾಣಕ್ಕೆ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕಾನೂನು ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News