ರೌಡಿ ಶೀಟರ್ ರವಿ ಬಂಧನ ಪ್ರಕರಣ: ಜೆಡಿಎಸ್ ಮುಖಂಡನ ವಿಚಾರಣೆ
Update: 2018-07-10 21:16 IST
ಬೆಂಗಳೂರು, ಜು.10: ರೌಡಿ ಶೀಟರ್ ಸೈಕಲ್ ರವಿ ಬಂಧನ ಪ್ರಕರಣ ಸಂಬಂಧ ಜೆಡಿಎಸ್ ಮುಖಂಡ ಅಲ್ತಾಫ್ ಖಾನ್‌ನನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ನಗರದ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಅಲ್ತಾಫ್ ಖಾನ್‌ನನ್ನು ಸಿಸಿಬಿ ಎಸ್ಸೈ ಪ್ರಕಾಶ್ ನೇತೃತ್ವದಲ್ಲಿ ವಿಚಾರಣೆ ನಡೆಸಿದರು. ಸೈಕಲ್ ರವಿ ಬಳಸುತ್ತಿದ್ದ ಮೊಬೈಲ್ ಕರೆ ಪರಿಶೀಲನೆಯ ಬಳಿಕ ವಿಚಾರಣೆಗೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ಚುನಾವಣೆ ವೇಳೆ ಅಲ್ತಾಫ್ ಖಾನ್ ಅವರ ಪರವಾಗಿ ಸೈಕಲ್ ರವಿ ಪ್ರಚಾರಕ್ಕೆ ಬಂದು ಬೆಂಬಲ ನೀಡಿದ್ದ ಎನ್ನಲಾಗಿದೆ. ಸೈಕಲ್ ರವಿ ಜೊತೆ ಇನ್ನೂ ಹಲವು ಪ್ರಭಾವಿಗಳು ಸಂಪರ್ಕದಲ್ಲಿರುವ ಮಾಹಿತಿ ಸಿಸಿಬಿಗೆ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಹಲವರ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.