×
Ad

ಬೆಂಗಳೂರು: ಅಧಿಕ ಶುಲ್ಕ ವಿರೋಧಿಸಿ ಎಸ್‌ಎಫ್‌ಐ ಪ್ರತಿಭಟನೆ

Update: 2018-07-10 21:58 IST

ಬೆಂಗಳೂರು, ಜು.10: ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶುಲ್ಕ ಹೆಚ್ಚಿಸಿರುವುದನ್ನು ವಿರೋಧಿಸಿ ಎಸ್‌ಎಫ್‌ಐ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎದುರು ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು, ಪ್ರಸ್ತುತ ಶೈಕ್ಷಣಿಕ ಸಾಲಿನ ವೈದ್ಯಕೀಯ, ಇಂಜಿನಿಯರಿಂಗ್ ಶುಲ್ಕ ಅಧಿಕಗೊಳಿಸುವ ಮೂಲಕ ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬುದನ್ನು ಸರಕಾರ ಹೇಳಲು ಹೊರಟಿದೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜ ದೇಸಾಯಿ, ಕಳೆದ ಸಾಲಿನಲ್ಲಿ ಸರಕಾರಿ ಕಾಲೇಜುಗಳಿಗೆ ರೂ. 16 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ, ಈ ಬಾರಿ 50 ಸಾವಿರ ರೂ.ಹೆಚ್ಚಿಸಲಾಗಿದೆ. ಅದೇ ರೀತಿ, ಖಾಸಗಿ ಕಾಲೇಜುಗಳಲ್ಲೂ ದುಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆಂಧ್ರ ಪ್ರದೇಶದಲ್ಲಿ ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಪ್ರವೇಶಿಸಲು ಕೇವಲ 9 ಸಾವಿರ ರೂ. ನೀಡಿದರೆ ಸಾಕು. ತಮಿಳುನಾಡಿನಲ್ಲೂ 13 ಸಾವಿರ ರೂ. ಶುಲ್ಕ ಇದೆ. ಕರ್ನಾಟಕ ರಾಜ್ಯದಲ್ಲಿಯೂ ಕಡಿಮೆ ಶುಲ್ಕ ಪಡೆಯಲು ಅವಕಾಶ ಇದೆ. ಆದರೆ, ಸರಕಾರ ಖಾಸಗಿ ಕಾಲೇಜುಗಳ ಕೈಗೊಂಬೆಯಾಗಿರುವ ಕಾರಣ, ಖಾಸಗಿ ಕಾಲೇಜುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಆದ್ದರಿಂದ, ಸರಕಾರ ಕೂಡಲೇ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶುಲ್ಕವನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿದರು.

ಮನವಿ: ಶುಲ್ಕ ಹೆಚ್ಚಳ ವಿರೋಧಿಸಿ ಎಸ್‌ಎಫ್‌ಐ ಸದಸ್ಯರು, ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಗಂಗಾಧರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ನರಸಿಂಹಮೂರ್ತಿ, ಟಿ.ಎಸ್.ಸುಮುಖ, ವೇಗಾನಂದ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News