×
Ad

ಬೆಂಗಳೂರು ಕೇಂದ್ರೀಯ ವಿವಿ ವಿಲೀನಕ್ಕೆ ಒತ್ತಾಯ

Update: 2018-07-10 22:07 IST

ಬೆಂಗಳೂರು, ಜು.10: ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ ರದ್ದುಗೊಳಿಸಿ ಶೈಕ್ಷಣಿಕ ವರ್ಷದಿಂದ ಬೆಂಗಳೂರು ವಿವಿಯೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಕ, ಶಿಕ್ಷಕೇತರ ಹಾಗೂ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಮಂಗಳವಾರ ವಿವಿಯ ಆವರಣದಲ್ಲಿ ಜಮಾಯಿಸಿದ ಒಕ್ಕೂಟದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕಚೇರಿ ಕೆಲಸಕ್ಕೆ ಗೈರಾಗುವ ಮೂಲಕ ಸಾಂಕೇತಿಕ ಧರಣಿ ನಡೆಸಿದರು. ಬೆಂಗಳೂರು ವಿವಿಯಲ್ಲಿರುವ 3 ವಿಭಾಗಗಳನ್ನು 2 ವಿಭಾಗಗಳನ್ನಾಗಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯ ಅಧಿಸೂಚನೆ ಮತ್ತು ಆಡಳಿತಾತ್ಮಕ ಕ್ರಮಗಳನ್ನು ರದ್ದುಗೊಳಿಸಬೇಕು. ಬೆಂಗಳೂರು ವಿವಿಯ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಅಗತ್ಯವಿರುವಷ್ಟು ಸಂಖ್ಯೆಯ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪ್ರೊ.ಟಿ.ಎಚ್. ಮೂರ್ತಿ, ಬೆಂಗಳೂರು ವಿಶ್ವವಿದ್ಯಾನಿಲಯ ಮೂರು ವಿಭಾಗಗಳಾಗಿ ವಿಂಗಡಿಸಿ ಕಲಾ, ವಾಣಿಜ್ಯ ಮತ್ತು ವಿಜ್ಞ್ಞಾನ ವಿಷಯಗಳ ಸ್ನಾತಕೋತ್ತರ ಅಧ್ಯಯನಗಳಿಗೆ ಅರ್ಜಿ ಆಹ್ವಾನಿಸಿದ್ದರಿಂದ ಇತರೆ ವಿಷಯಗಳ ಅಧ್ಯಯನದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹೀಗಾಗಿ, ಕೇಂದ್ರೀಯ ವಿವಿಯಲ್ಲಿ ಆಸಕ್ತರು ಶಿಕ್ಷಣ ಪಡೆಯಲು ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ದೂರಿದರು.

ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಖಾಯಂ ಉಪನ್ಯಾಸಕರಿಲ್ಲ. ಕೆಲವೇ ಕೆಲವು ಅತಿಥಿ ಉಪನ್ಯಾಸಕರಿಂದ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳ ಬೋಧನೆ ಮತ್ತು ಸಂಶೋಧನೆಗೆ ತೊಡಕಾಗಿದೆ. ಅಗತ್ಯ ಸಂಪನ್ಮೂಲಗಳ ಕೊರತೆ ಹಾಗೂ ಕಡಿಮೆ ಅನುದಾನ ನೀಡುತ್ತಿರುವುದರಿಂದಾಗಿ ಹಣಕಾಸಿನ ವ್ಯವಹಾರದಲ್ಲಿಯೂ ಸಹ ಪಾರದರ್ಶಕತೆ ಇಲ್ಲದಂತಾಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News