×
Ad

ಪಾರಂಪರಿಕ ಸ್ಮಾರಕಗಳ ನವೀಕರಣಕ್ಕೆ ಸೂಕ್ತ ಕ್ರಮ: ಸಚಿವ ಸಾ.ರಾ.ಮಹೇಶ್

Update: 2018-07-10 22:11 IST

ಬೆಂಗಳೂರು, ಜು.10: ರಾಜ್ಯದಲ್ಲಿರುವ ಪಾರಂಪರಿಕ ತಾಣ ಹಾಗೂ ಸ್ಮಾರಕಗಳನ್ನು ಹುಡುಕಿ ಸರಕಾರದ ವತಿಯಿಂದಲೇ ನವೀಕರಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಮಂಗಳವಾರ ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯೆ ಡಾ.ತೇಜಸ್ವಿನಿ ಗೌಡ ನಿಯಮ 72ರ ಅಡಿಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿರುವ ಐತಿಹಾಸಿಕ ತಾಣಗಳು ನಮ್ಮ ಸಂಸ್ಕೃತಿ ಪ್ರತೀಕವಾಗಿವೆ. ಇವುಗಳನ್ನು ಸಂರಕ್ಷಿಸಿ ಪ್ರವಾಸೋದ್ಯಮ ಕೇಂದ್ರಗಳನ್ನಾಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರಕಾರವು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಡನೆ ರಾಜ್ಯದಾದ್ಯಂತ ಸ್ಮಾರಕಗಳನ್ನು ಸಂರಕ್ಷಿಸುವ ಬೃಹತ್ ಕಾರ್ಯದಲ್ಲಿ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಸಾರ್ವಜನಿಕ ಸಹಭಾಗಿತ್ವದಡಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ನೊಡನೆ 2002-03ನೆ ಸಾಲಿನಿಂದ ಒಡಂಬಡಿಕೆ ಮಾಡಿಕೊಂಡು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲಾಗುತ್ತಿದೆ ಎಂದು ಅವರು ಹೇಳಿದರು.

ಈ ಯೋಜನೆಯಡಿ ಒಟ್ಟು 176 ದೇವಾಲಯ-ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವನ್ನು 29.68ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಅವುಗಳ ಪೈಕಿ 161 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನುಳಿದ 16 ಕಾಮಗಾರಿಗಳು ಪ್ರಗತಿಯ ಹಂತದಲ್ಲಿದೆ ಎಂದು ಅವರು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ, ನಮ್ಮ ಸರಕಾರಗಳು ಐತಿಹಾಸಿಕ ಸ್ಮಾರಕಗಳ ಕುರಿತು ನಿರ್ಲಕ್ಷ ಧೋರಣೆ ತಾಳಿವೆ ಎಂಬುದಕ್ಕೆ ಹಂಪಿ ಕ್ಷೇತ್ರವೆ ಉದಾಹರಣೆಯಾಗಿದೆ. ಜಗತ್ತಿನಲ್ಲಿ ಐತಿಹಾಸಿಕ ತಾಣಗಳಲ್ಲಿ ಹಂಪಿಗೆ ಎರಡನೆ ಸ್ಥಾನವಿದೆ. ಆದರೆ, ಅಲ್ಲಿನ ನಿರ್ವಹಣೆ ಮಾತ್ರ ತೀರಾ ಕಳಪೆಯಿಂದ ಕೂಡಿದೆ ಎಂದು ವಿಷಾದಿಸಿದರು.

ಹಂಪಿಯ ಸುತ್ತಮುತ್ತ ಪಾರ್ಥೇನಿಯಂ ಗಿಡಗಳು ಬೆಳೆದು, ಅಲ್ಲಿನ ದೇವಸ್ಥಾನಗಳ ಸೌಂದರ್ಯವನ್ನು ಹಾಳು ಮಾಡಿವೆ. ಇದನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಅಲ್ಲಿನ ರಸ್ತೆಗಳು ಸುಸಜ್ಜಿತವಾಗಿಲ್ಲ. ಪ್ರವಾಸಿಗರು ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ಈ ಕುರಿತು ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸಿ, ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಬಿಜೆಪಿ ಸದಸ್ಯೆ ಡಾ.ತೇಜಸ್ವಿನಿ ಮಾತನಾಡಿ, ನಮ್ಮ ಪರಂಪರೆಯ ಬಗ್ಗೆ ನಿಜವಾಗಿ ಕಾಳಜಿ ವಹಿಸಿದ್ದೇ ಆದರೆ, ಪ್ರತಿ ಗ್ರಾಮದಲ್ಲೂ ಒಂದೊಂದು ಸ್ಮಾರಕಗಳನ್ನು ಹುಡುಕಿ ನವೀಕರಣಗೊಳಿಸಬಹುದು. ಅಷ್ಟು ಅಗಾಧವಾದ ಐತಿಹಾಸಿಕ ಸ್ಮಾರಕಗಳನ್ನು ರಾಜ್ಯ ಸರಕಾರ ಹೊಂದಿದೆ. ಈ ಬಗ್ಗೆ ರಾಜ್ಯ ಸರಕಾರ, ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಲಿ ಎಂದು ಮನವಿ ಮಾಡಿದರು.

ಪ್ರವಾಸಿ ತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೈಡ್‌ಗಳನ್ನು (ಮಾರ್ಗದರ್ಶಕ) ಹೆಚ್ಚಿನ ತರಬೇತಿಗಾಗಿ ವಿದೇಶಕ್ಕೆ ಕಳುಹಿಸಿ, ಸರಕಾರದ ವತಿಯಿಂದ ಅವರಿಗೆ ವೇತನ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು.
-ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News