ಪೌರ ಕಾರ್ಮಿಕರ ವೇತನ: ಜೂನ್‌ ವರೆಗಿನ 27 ಕೋಟಿ ಬಿಡುಗಡೆ

Update: 2018-07-10 16:52 GMT

ಬೆಂಗಳೂರು, ಜು.10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಕಿ ಉಳಿಸಿಕೊಂಡಿದ್ದ ಪೌರ ಕಾರ್ಮಿಕರ ವೇತನ ನೀಡುವಂತೆ ಆದೇಶ ಹೊರಡಿಸಲಾಗಿದೆ.

ಮಂಗಳವಾರ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಮಲ್ಲೇಶ್ವರಂನ ಐಪಿಪಿ ಸೆಂಟರ್‌ನಲ್ಲಿ ನಡೆದ ಸಭೆಯಲ್ಲಿ ಬಾಕಿ ಉಳಿಸಿಕೊಂಡಿರುವ ವೇತನವನ್ನು ಜೂನ್‌ವರೆಗೆ ಪಾವತಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ಬಾಕಿ ಇದ್ದ ಎಲ್ಲ ವಲಯಗಳ 27,01,38,901 ರೂ. (ಇಪ್ಪತ್ತೇಳು ಕೋಟಿ ಒಂದು ಲಕ್ಷದ ಮೂವತ್ತೆಂಟು ಸಾವಿರದ ಒಂಬೈನೂರ ಒಂದು ರೂ) ಅನುದಾನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರತಿ ತಿಂಗಳ 1ನೇ ತಾರೀಖಿನಂದು ಪೌರ ಕಾರ್ಮಿಕರ ಬಯೋಮೆಟ್ರಿಕ್ ಡಾಟಾ ಪರಿಶೀಲನೆ ನಡೆಸಿದ ನಂತರ 7ನೇ ತಾರೀಖಿನೊಳಗೆ ಎಲ್ಲ ಪೌರ ಕಾರ್ಮಿಕರ ವೇತನ ಪಾವತಿಸಬೇಕು. ಜೊತೆಗೆ, 3 ದಿನಗಳೊಳಗೆ ಇಎಸ್‌ಐ, ಪಿಎಫ್ ತುಂಬಬೇಕೆಂದು ಎಲ್ಲ ವಲಯಗಳ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ನೀಡಿದ್ದಾರೆ.

ಪ್ರತಿಭಟನೆ ಅಂತ್ಯ: ಬಿಬಿಎಂಪಿ ವೇತನ ನೀಡದ ಕಾರಣ ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡ ನಂತರ ವೇತನ ಬಿಡುಗಡೆಗೊಳಿಸಲು ಆಗ್ರಹಿಸಿ ಬಿಬಿಎಂಪಿ ಪೌರಕಾರ್ಮಿಕರು ಪಟ್ಟು ಹಿಡಿದು ಪ್ರತಿಭಟನಾ ಧರಣಿ ನಡೆಸುತ್ತಿದ್ದರು. ಬಿಬಿಎಂಪಿ ಬಾಕಿ ಉಳಿಸಿಕೊಂಡಿದ್ದ ವೇತನ ಬಿಡುಗಡೆ ಆದೇಶ ಹೊರ ಬೀಳುತ್ತಿದ್ದಂತೆ ಪೌರ ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News