×
Ad

ಅನ್ನಭಾಗ್ಯ ಯೋಜನೆ: ಅಕ್ಕಿ ಪ್ರಮಾಣ ಹೆಚ್ಚಿಸಲು ಶಾಸಕ ಡಾ.ಸುಧಾಕರ್ ಆಗ್ರಹ

Update: 2018-07-10 22:24 IST

ಬೆಂಗಳೂರು, ಜು. 10: ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿದ್ದ ಅಕ್ಕಿ ಪ್ರಮಾಣ ಕಡಿತ ಮಾಡದೆ 7 ಕೆಜಿಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್ ಸದಸ್ಯ ಡಾ.ಸುಧಾಕರ್, ಸಿಎಂ ಕುಮಾರಸ್ವಾಮಿ ತಮ್ಮ ಹೆಸರಿನಲ್ಲಿ ಇನ್ನೂ 1 ಕೆಜಿ ಅಕ್ಕಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಮಹತ್ವಾಕಾಂಕ್ಷಿಯ ಅನ್ನಭಾಗ್ಯ ಯೋಜನೆ ಗ್ರಾಮೀಣ ಬಡವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದರು.

ಸಣ್ಣ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ. ಒಂದು ವೇಳೆ ಸಾಲ ಕೊಟ್ಟರೂ ಬ್ಯಾಂಕ್‌ಗಳು ಕೇಳುವ ಖಾತ್ರಿ ಕೊಡಲು ರೈತರಿಗೆ ಸಾಧ್ಯವಿಲ್ಲ. ಹೀಗಾಗಿ ಸಹಕಾರ ಸಂಘಗಳಲ್ಲಿ ರೈತರು ಹೆಚ್ಚಾಗಿ ಸಾಲ ಪಡೆದಿರುತ್ತಾರೆ. ಅವರಿಗೆ 2ಲಕ್ಷ ರೂ.ವರೆಗೆ ಮಾತ್ರ ಸೀಮಿತಗೊಳಿಸದೆ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಮಹಿಳೆಯರೇ ರಚಿಸಿಕೊಂಡಿರುವ ಸ್ತ್ರೀಶಕ್ತಿ ಸಂಘಗಳು, ಸಹಕಾರ ಸಂಘಗಳ ಮೂಲಕ ಪಡೆದಿರುವ ಸಾಲಮನ್ನಾ ಮಾಡಬೇಕು ಎಂದು ಕೋರಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯೆ ರೂಪಾ ಶಶಿಧರ್, ಸ್ತ್ರೀಶಕ್ತಿ ಸಂಘಗಳಿಗೆ ತಲಾ 30ಸಾವಿರ ರೂ.ಸಾಲ ನೀಡಲಾಗುತ್ತಿದೆ. ರಾಜ್ಯದಲ್ಲಿ 11ಲಕ್ಷ ಮಹಿಳೆಯರು ಸಾಲ ಪಡೆದಿದ್ದು, ಅದು 1 ಕೋಟಿ ರೂ. ಆಗಬಹುದು. ಅದನ್ನು ಮನ್ನಾ ಮಾಡಬೇಕೆಂದು ಕೋರಿದರು.

ಸರಕಾರಿ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಉತ್ತರದಾಯಿತ್ವವೇ ಇಲ್ಲ. ಹೀಗಾಗಿ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ. ಆದುದರಿಂದ ಈ ಬಗ್ಗೆ ಸರಕಾರ ಸೂಕ್ತ ಗಮನಹರಿಸಬೇಕು. ಸರಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ವಿಳಂಬಗತಿಯಲ್ಲಿ ಸಾಗುತ್ತಿರುವ ಎತ್ತಿನಹೊಳೆ ಮತ್ತು ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಆ ಭಾಗಕ್ಕೆ ನೀರು ಹರಿಸಬೇಕು. ಕೋಲಾರ, ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಸಮರ್ಪಕ ನೀರು, ವಿದ್ಯುತ್ ನೀಡಿದರೆ ಅವರೇ ರಾಜ್ಯ ಸರಕಾರಕ್ಕೆ ಅನುದಾನ ನೀಡಲಿದ್ದಾರೆ’
-ಡಾ.ಸುಧಾಕರ್ ಕಾಂಗ್ರೆಸ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News